ನಿದ್ರಾಮಯ್ಯ ಸರ್ಕಾರ ಬಡಿದೆಬ್ಬಿಸಲು ಬಿಜೆಪಿ ಗೆಲ್ಲಿಸಿ: ಸುರೇಶ ಕುಮಾರ್
ಬಂಟ್ವಾಳ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಹಲವಾರು ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸಿ ಕಳೆದ ಎರಡು ವರ್ಷಗಳಿಂದ ಜನರನ್ನು ಕತ್ತಲೆಯಲ್ಲಿರಿಸಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಿದ್ದೆಯಲ್ಲಿ ಮುಳುಗಿದೆ. ಇದನ್ನು ಎಚ್ಚರಿಸಲು ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಬೇಕು ಎಂದು ಕಾನೂನು ಮತ್ತು ನಗರಾಭಿವೃದ್ಧಿ ಮಾಜಿ ಸಚಿವ ಸುರೇಶ ಕುಮಾರ್ ಹೇಳಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸಮೀಪದ ಅರ್ಕುಳ ಸಭಾಂಗಣದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಗೋವು, ಅರಣ್ಯ ಮತ್ತು ಮರಳು ಲೂಟಿಕೋರರನ್ನು ಸಂರಕ್ಷಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗುತ್ತಿಗೆದಾರರಿಂದ ನೋಟಿನ ಕಂತೆ ಕಡೆದ ಸ್ವತಃ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರನ್ನು ಸಂಪುಟದಿಂದ ಕೈಬಿಟ್ಟಿಲ್ಲ. ರಾಜ್ಯದಲ್ಲಿ ಉಪಲೋಕಾಯುಕ್ತ ಹುದ್ದೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ತೋರುತ್ತಿರುವ ಅನಾದಾರ ಪ್ರವೃತ್ತಿ ದೇಶಕ್ಕೆ ಕಪ್ಪು ಚುಕ್ಕೆಯಾಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳಿಗೂ ತೆರಿಗೆ ವಿಧಿಸುವ ಸರ್ಕಾರದ ದುಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಟೀಕಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾತನಾಡಿ, ಚುನಾವಣೆ ವೇಳೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅಡ್ಡ ದಾರಿ ಹಿಡಿಯುವ ಸಾಧ್ಯತೆ ಇದೆ. ಇದಕ್ಕಾಗಿ ಬಿಜೆಪಿ ಕಾರ್ಯಕರ್ತರು ಎಚ್ಚರದಿಂದ ಇರಬೇಕು ಎಂದು ಅವರು ಸಲಹೆ ವ್ಯಕ್ತ ಪಡಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕೇಂದ್ರ ಸರ್ಕಾರದಿಂದ ಕೇರಳ ಮಾದರಿಯಲ್ಲಿ ರೈತರಿಗೆ ಸೂಕ್ತ ಪ್ಯಾಕೇಜ್ ದೊರಕಿಸಿ ಕೊಡುವಲ್ಲಿ ರಾಜ್ಯ ಸರ್ಕಾರವು ತೀರಾ ನಿರ್ಲಕ್ಷ್ಯ ವಹಿಸಿದೆ. ಎತ್ತಿನ ಹೊಳೆ ಯೋಜನೆ ಯೋಜನೆ ವಿರುದ್ಧ ಕೋಲಾರ ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲೆ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದರೂ ರೂ 13ಸಾವಿರ ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದೆ. ಈ ಯೋಜನೆ ಮತ್ತು ರೈತರ ಕುಮ್ಕಿ ಜಮೀನಿಗೆ ಸಂಬಂಧಿಸಿದಂತೆ ನ್ಯಾಯ ದೊರಕಿಸಿ ಕೊಡಲು ಮುಂದಿನ ವಾರದಿಂದಲೇ ಉಗ್ರ ಹೋರಾಟ ಆರಂಭಿಸುವುದಾಗಿ ಅವರು ಎಚ್ಚರಿಸಿದರು. ಭಾರತದ ಕಡೆಗೆ ವಿಶ್ವವೇ ಎದುರು ನೋಡುತ್ತಿದ್ದು, ಇಲ್ಲಿನ ಪ್ರಧಾನಿ ನರೇಂದ್ರ ಮೋದಿ £ಆಡಳಿತ ವೈಖರಿ ಬಗ್ಗೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮರಂತಹ ಮಹಾನ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಂತಹ ವ್ಯಕ್ತಿಗಳು ಜನರ ಗಮನ ಬೇರೆಡೆಗೆ ಸೆಳೆಯಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ಏಳು ಮೂವರು ಸಚಿವರು ಸಹಿತ ಏಳು ಮಂದಿ ಶಾಸಕರು ಇದ್ದರೂ ಅಭಿವೃದ್ಧಿಗೆ ಬದಲಾಗಿ ಹೂವಿನ ವ್ಯಾಪಾರಿ ಪ್ರಶಾಂತ ಪೂಜಾರಿ ಅವರಂತಹ ಅಮಾಯಕರು ಹತ್ಯೆಯಾಗುತ್ತಿದ್ದರೂ ಮೌನವಹಿಸಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಕೃಷ್ಣ ಪಾಲೆಮಾರ್, ಶಾಸಕ ಅಂಗಾರ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಎನ್.ಯೋಗೀಶ ಭಟ್, ಕೆ.ಪದ್ಮನಾಭ ಕೊಟ್ಟಾರಿ, ಕುಂಬ್ಳೆ ಸುಂದರ ರಾವ್, ಕೆ.ಜಯರಾಮ ಶೆಟ್ಟಿ, ಬಾಲಕೃಷ್ಣ ಭಟ್, ಕೆ.ಪ್ರಭಾಕರ ಬಂಗೇರ, ಕೆ.ಮೋನಪ್ಪ ಭಂಡಾರಿ, ಮಲ್ಲಿಕಾ ಆರ್.ಪ್ರಸಾದ್, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಗಣೇಶ ರಾವ್, ಪ್ರಭಾ ಮಾಲಿನಿ ಮತ್ತಿತರರು ಇದ್ದರು.
ಇದೇ ವೇಳೆ ಪುಷ್ಪರಾಜ್ ಬೆಳ್ತಂಗಡಿ ಇವರು ಬಿಜೆಪಿಗೆ ಸೇರ್ಪಡೆಗೊಂಡರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮಾಜಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ, ಕೆ.ಟಿ.ಶೈಲಜಾ ಭಟ್, ಮಾಜಿ ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ದನ್, ನಿತೇಶ ಶೆಟ್ಟಿ, ಸತೀಶ ಕುಂಪಲ ಸಹಿತ ವಿವಿಧ ತಾಲ್ಲೂಕಿನ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಸ್ವಾಗತಿಸಿ, ಕಿಶೋರ್ ರೈ ವಂದಿಸಿದರು. ಉಪಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
