ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ಹಾಗೂ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಸಹಯೋಗದಲ್ಲಿ ವಿಶೇಷ ಮಕ್ಕಳ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಆರೋಗ್ಯ ಅಧಿಕಾರಿಗಳು ವಿಕ್ರಂ ಮತ್ತು ಸತೀಶ್ ಆಗಮಿಸಿ ವೈಯಕ್ತಿಕ ಸ್ವಚ್ಚತೆ ಬಗ್ಗೆ ಮಾಹಿತಿ ನೀಡಿದರು. ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್‍ರವರು ಪೋಕ್ಸೊ ಕಾಯಿದೆ ಕುರಿತು ಮಕ್ಕಳಿಗೆ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಪರಿಸರ ರಕ್ಷಣೆ ಹಾಗೂ ತ್ಯಾಜ್ಯ ವಿಲೆವಾರಿ ಬಗ್ಗೆ ಜಾಗೃತಿ ಮೂಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭರತ್ ಎಸ್.ಕರ್ಕೆರ ಆಗಮಿಸಿ ಲಿಂಗ ತಾರತಮ್ಯ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಮಕ್ಕಳು ತಮ್ಮ ಪ್ರಶ್ನೆ, ಸಮಸ್ಯೆಗಳನ್ನು ಈ ವೇದಿಕೆಯಲ್ಲಿ ಮಂಡಿಸಿದರು. ಇದಕ್ಕೆ ಉತ್ತರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷೆ ವಿಜಯಗೋಪಾಲ, ಇಲಾಖೆಗಳು ಪರಿಹಾರ ಕೊಡುವುದಾಗಿ ಆಶ್ವಾಸನೆ ನೀಡಿದರು.
ಮಕ್ಕಳ ಸಮಸ್ಯೆಗಳು, ಶಾಲೆಯ ಸಮಸ್ಯೆಗಳು, ಊರಿನ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ ಮುಂದಿಟ್ಟು ಪರಿಹಾರ ಕಂಡುಕೊಳ್ಳಲು ಗ್ರಾಮ ಪಂಚಾಯತ್‍ಗೆ ಒಳಪಟ್ಟ ಶಾಲಾ ಮಕ್ಕಳಿಗೆ ವಿಶೇಷ ಮಕ್ಕಳ ಗ್ರಾಮ ಸಭೆಯನ್ನು ಏರ್ಪಡಿಸಿತು.
ಶಾಲಾ ಶಿಕ್ಷಕರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
