ಕೈಕಂಬ:ಪೊಳಲಿಯಿಂದ ವಿಮಾನನಿಲ್ದಾಣದವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿ ಅಭೀವೃದ್ದಿ ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಈ ರಸ್ತೆಯನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ದಿಪಡಿಸಿ ಪ್ರಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಪೊಳಲಿ , ಕರಿಯಂಗಳ ಮತ್ತು ಅಮ್ಮುಂಜೆ ಗ್ರಾಮಸ್ಥರ ಪರವಾಗಿ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ಸರ್ವಮಂಗಳ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕ್ಷೇತ್ರದ ಅಭೀವೃದ್ದಿಯಲ್ಲಿ ತಾನು ಯಾವುದೇ ಉದಾಸೀನ ತೋರಿಲ್ಲ, ಜನರ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಸಮಗ್ರ ಅಭೀವೃದ್ದಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ, ಪೊಳಲಿ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಮುಂದಿನದಿನಗಳಲ್ಲಿ ಹಂತ ಹಂತವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಪೊಳಲಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದವರು ಈ ಸಂದರ್ಭ ತಿಳಿಸಿದರು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಚಿವ ಬಿ.ರಮಾನಾಥ ರೈ ಯವರ ಕಾರ್ಯವನ್ನು ಅಭಿನಂದಿಸಿದರು. ಜಿ.ಪಂ.ಸದಸ್ಯ ಚಂದ್ರ ಪ್ರಕಾಶ ಶೆಟ್ಟಿ ಹಾಗೂ ನಿವೃತ್ತ ಶಿಕ್ಷಕ ರಾಮಭಟ್, ದೇವಳದ ಮೊಕ್ತೇಸರ ಸೂರ್ಯನಾರಾಯಣ ರಾವ್ ಚೇರ ಅವರು ಪೊಳಲಿ ದೇವಳದ ಸುತ್ತಮುತ್ತ ನಡೆದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಪ್ರಧಾನ ಅರ್ಚಕ ಮಾಧವ ಭಟ್, ಪ್ರಧಾನ ತಂತ್ರಿ ವರ್ಯರಾದ ಸುಬ್ರಹ್ಮಣ್ಯ ತಂತ್ರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಯೋಗೀಶ್, ಮಂಗಳೂರು ಮ.ನ.ಪಾ ಸದಸ್ಯರಾದ ಪ್ರಕಾಶ್ ಸಾಲಿಯಾನ್, ಅಬ್ದುಲ್ ಲತೀಫ್, ಅಡ್ಡೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಯು.ಬಿ.ಇಬ್ರಾಹಿಂ, ಕರಿಯಂಗಳ ಪಂಚಾಯತ್ ಸದಸ್ಯೆ ವೀಣಾ ಆಚಾರ್ಯ, ಶಾಕೀರ್ ಬಡಕಬೈಲು, ಉಮೇಶ್ ಆಚಾರ್ಯ, ರಾಜೇಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಕರಿಯಂಗಳ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಅಭಿನಂದನಾ ಭಾಷಣಗೈದರು. ಚಂದ್ರಹಾಸ ಪಲ್ಲಿಪ್ಪಾಡಿ ಸ್ವಾಗತಿಸಿದರು, ರಾಜುಕೋಟ್ಯಾನ್ ವಂದಿಸಿದರು. ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
