ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಎಂಬಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರ ದೇವಸ್ಥಾನವು ಸಂಪೂರ್ಣ ಪುನರ್‍ನವೀಕರಣಗೊಂಡು ಇದೇ 11ರಿಂದ 17ರತನಕ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಸಿದ್ಧಗೊಳ್ಳುತ್ತಿದೆ. ಇಲ್ಲಿನ ಹೊಯ್ಸಳ ಶೈಲಿಯ ಶ್ರೀ ಕೋದಂಡರಾಮಚಂದ್ರ ದೇವರ ಆಕರ್ಷಕ ವಿಗ್ರಹ ಸಹಿತ ಹನುಮಂತ, ಗರುಡ, ನಾಗದೇವರು ಮತ್ತು ಆರ್ಯಕಾತ್ಯಾಯಿನಿ ದೇವರ ವಿಗ್ರಹ ಪುನರ್ ಪ್ರತಿಷ್ಠೆಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಗ್ರಾಮದ ಭಕ್ತರು ಶ್ರಮದಾನದಲ್ಲಿ ತೊಡಗಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಅಂಚನ್ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಬಂಗೇರ ನಾಟಿ ಇವರು ತಿಳಿಸಿದ್ದಾರೆ.
ಬಿ.ಸಿ.ರೋಡ್‍ನಲ್ಲಿ ಶುಕ್ರವಾರ ಸಂಜೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೂಡ್ಲಿ ಮಠದ 19ನೇ ಪೀಠಸ್ಥ ಶ್ರೀರಾಮ ತೀರ್ಥರು ನಾಟಿ ಅಗ್ರಹಾರ ನೇತ್ರಾವತಿ ನದಿಯಲ್ಲಿ ನೀರಕಟ್ಟೆ ನಿರ್ಮಿಸಿ ಬಳಿಕ ಇಲ್ಲೇ ವೃಂದಾವನಸ್ಥರಾಗಿದ್ದರು. ಇಲ್ಲಿನ ದೇವರ ವಿಗ್ರಹಗಳಲ್ಲಿ ಹೊಯ್ಸಳರ ಶಿಲ್ಪ ಶೈಲಿ ಕಾಣಿಸಿಕೊಂಡು ಕಳೆದ 1984ರತನಕ ಜೀರ್ಣಾವಸ್ಥೆ ತಲುಪಿತ್ತು. ಇದರಿಂದಾಗಿ ಸ್ಥಳೀಯ ಕೃಷಿಕ ದಿವಂಗತ ನಾಟಿ ಪದ್ಮನಾಭ ಸಪಲ್ಯ ಮತ್ತು ಸುಬ್ರಾಯ ಹೊಳ್ಳ ಮತ್ತಿತರರು ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶೋತ್ಸವ ನೆವೇರಿಸಿದ್ದಾರೆ. ಇದೀಗ ಮತ್ತೆ ದೇವಸ್ಥಾನ ಸಂಪೂರ್ಣ ಪುನರ್‍ನವೀಕರಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ ಎಂದರು.
ವೇದಮೂರ್ತಿ ಪೆÇಳಲಿ ಸುಬ್ರಹ್ಮಣ್ಯ ತಂತ್ರಿ ಪೌರೋಹಿತ್ಯದಲ್ಲಿ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ಇದೇ 11ರಂದು ಸಂಜೆ 2. 30ಕ್ಕೆ ಪಾಣೆಮಂಗಳೂರಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಅದೇ ದಿನ ಸಂಜೆ ಉದ್ಯಮಿ ಬಿ.ರಘು ಸಪಲ್ಯರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ವೇದಮೂರ್ತಿ ಶ್ರೀನಿವಾಸ ಐತಾಳ್ ಆಶೀರ್ವಚನ ನೀಡುವರು.
ಇದೇ 12ರಂದು ಮೃತ್ಯುಂಜಯ ಹೋಮ, ಚಂಡಿಕಾಯಾಗ, ಮಹಾಪೂಜೆ, ಅಂಕುರರೋಪಣ, ದುರ್ಗಾಪೂಜೆ ನಡೆಯಲಿದ್ದು, ರಾತ್ರಿ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ 13ರಂದು ವಿವಿಧ ಹೋಮ, ಹವನ, ಪೂಜೆ ಮತ್ತು ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಇದೇ 14ರಂದು ವಿವಿಧ ವೈದಿಕ ಕಾರ್ಯಕ್ರಮ ಮತ್ತು 15ರಂದು ದೇವರ ಪುನರ್ ಪ್ರತಿಷ್ಠೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಶಂಭೂರು ಸರ್ಕಾರಿ ಪ್ರೌಢಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಇದೇ 16ರಂದು ದೇವರಿಗೆ ವಿವಿಧ ಹೋಮ ಹವನಗಳು, ಸಂಜೆ 7.30ಕ್ಕೆ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಸಂಚಾಲಕ ಡಾ. ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಇದೇ 17ರಂದು ಬೆಳಿಗ್ಗೆ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದ್ದು, ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು.
ಅದೇ ದಿನ ಸಂಜೆ 7.30ಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡುವರು. ತುಳು ಜಾನಪದ ವಿದ್ವಾಂಸ ದಯಾನಂದ ಕತ್ತಲಸಾರ್ ದಿಕ್ಸೂಚಿ ಭಾಷಣ ಮಾಡುವರು. ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ನಾಟಕ, ಯಕ್ಷಗಾನ ಮತ್ತಿತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮವೂ ಇದೆ. ಇದೇ 15,16,17ರಂದು ದಿನವಿಡೀ ಪಾಣೆಮಂಗಳೂರಿಂದ ನಾಟಿ ಕ್ಷೇತ್ರಕ್ಕೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಮದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಶಾಂತಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ನಾಟಿ, ಗೌರವಾಧ್ಯಕ್ಷ ಪದ್ಮನಾಭ ಮಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪ್ರಮುಖರಾದ ಪುರುಷೋತ್ತಮ ಅಂಚನ್, ಉಮೇಶ ಬೋಳಂತೂರು, ಎಂ.ಎಸ್.ಜಯಂತಿ, ವಿಠಲ ಕೋಟ್ಯಾನ್, ಪ್ರೇಮನಾಥ ಶೆಟ್ಟಿ, ಕೃಷ್ಣಪ್ಪ ಪೂಜಾರಿ ನಾಟಿ ಮತ್ತಿತರರು ಉಪಸ್ಥಿತರಿದ್ದರು.
