ಬಂಟ್ವಾಳ: ಬಿ.ಸಿ.ರೋಡಿನಿಂದ ಸುರತ್ಕಲ್ ವರೆಗಿನ ಚತುಷ್ಪಥ ರಸ್ತೆಯ ಸರ್ವೀಸ್ ರಸ್ತೆಗಳ ನಿರ್ಮಾಣ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಕೇಂದ್ರ ಸರ್ಕಾರ 24 ಕೋಟಿ ರೂ ಮಂಜೂರು ಗೊಳಿಸಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಸಿ.ರೋಡು ಅಡ್ಡಹೊಳೆ ಹೆದ್ದಾರಿ ಡಾಮರೀಕರಣ, ಬಂಟ್ವಾಳ-ಬೆಳ್ತಂಗಡಿ, ಮುಲ್ಕಿ-ಬಂಟ್ವಾಳ ರಸ್ತೆ ಅಭಿವೃದ್ದಿಗೆ ಕೇಂದ್ರ ಸರ್ಕಾರ ಅನುದಾನ ಮಂಜೂರುಮಾಡಿದ್ದು, ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ, ಮಂಗಳೂರು ಕುಳಾಯಿಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ 250 ಕೋಟಿ ಅನುದಾನ ಮಂಜೂರಾಗಿದೆ ಎಂದರು.
ಜನರು ಚಾಟಿ ಹಿಡಿದು ನಿಂತಿದ್ದಾರೆ..

_20160106_060700
ಕರ್ನಾಟಕ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ತಮ್ಮ ಆಡಳಿತದಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿದೆ. ಸಿದ್ದರಾಮಯ್ಯ ಸರ್ಕಾರ ನಿದ್ದೆಯ ಮಂಪರಿನಿಂದ ಇನ್ನೂ ಎಚ್ಚೆತ್ತಿಲ್ಲ, ಈ ಸರ್ಕಾರವನ್ನು ನಿದ್ದೆಯಿಂದ ಎಚ್ಚರಿಸಲು ಜನಸಾಮಾನ್ಯರು ಚಾಟಿ ಹಿಡಿದು ನಿಂತಿದ್ದಾರೆ ಎಂದು ಟೀಕಿಸಿದ ನಳಿನ್ ಕುಮಾರ್ ಕಟೀಲು ಮುಂದಿನ ಜಿ.ಪಂ., ತಾ.ಪಂ ಚುನಾವಣೆಯಲ್ಲಿ ಬಿಜೆಪಿಗೆ ಇದು ವರದಾನವಾಗಲಿದೆ ಎಂದರು.
ರಬ್ಬರ್ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ರಬ್ಬರ್ ಗೆ ಬೆಂಬಲ ಬೆಲೆ ಘೋಷಿಸಿದ್ದ ಕೇರಳಕ್ಕೆ ಕೇಂದ್ರಸರ್ಕಾರ 550 ಕೋಟಿ ಅನುದಾನ ನೀಡಿದೆ. ಆದರೆ ಕರ್ನಾಟಕ ಸರ್ಕಾರ ಕನಿಷ್ಠ ರೈತರಿಗೆ ಬೆಂಬಲ ಬೆಲೆ ನೀಡುವ ಮನಸ್ಸು ಮಾಡಿಲ್ಲ ಎಂದವರು ಆರೋಪಿಸಿದರು. ರೈತರ ಪರ ಸರ್ಕಾರ ಎಂದು ಹೇಳುತ್ತಿರುವ ಕರ್ನಾಟಕ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ದೇಶದಲ್ಲಿ ಅತೀಹೆಚ್ಚು ರೈತರ ಆತ್ಮಹತ್ಯೆ ಕರ್ನಾಟಕದಲ್ಲಿ ನಡೆದಿದೆ. ಬಿಪಿಎಲ್.ಪಡಿತರ ಚೀಟಿಯನ್ನು ರದ್ದುಗೊಳಿಸುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ. ಕಮ್ಕಿ ಹಕ್ಕು ವಿಚಾರದಲ್ಲೂ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿಲ್ಲ ಎಂದು ಟೀಕಾಪ್ರಹಾರ ಗೈದ ಸಂಸದರು, ಜಿಲ್ಲೆಯಲ್ಲಿ 11 ಕೊಲೆಗಳು ನಡೆದಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹಸಚಿವರ ಬದಲಾವಣೆಯಾಗಿರುವುದು ಹೊರತುಪಡಿಸಿದರೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಯಡಿಯೂರಪ್ಪ ಸರ್ಕಾರ ಧೈರ್ಯದಿಂದ ಸಾರಾಯಿ ನಿಷೇಧ ಮಾಡಿದ್ದರೆ, ಸಿದ್ದರಾಮಯ್ಯ ಸರ್ಕಾರ ಜನರಿಗೆ ನೀರುಕೊಡುವ ಬದಲು ಅಲ್ಲಲ್ಲಿ ಸಾರಾಯಿ ಅಂಗಡಿ ತೆರೆಯುವ ಮೂಲಕ ಬೀರುಕೊಡುವ ಕೆಲಸ ಮಾಡುತ್ತಿದೆ ಎಂದು ಟೀಕಾಪ್ರಹಾರ ಗೈದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ದ.ಕ.ಜಿಲ್ಲಾ ಪಂಚಾಯತ್ ಹಾಗೂ ಐದು ತಾ.ಪಂ.ನಲ್ಲೂ ಬಿಜೆಪಿ ಆಡಳಿತವಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ತಾ.ಪಂ.ಗೆ 1 ಕೋಟಿ ಅನುದಾನವನ್ನು ಒದಗಿಸಿತ್ತು, ಕಾಂಗ್ರೇಸ್ ಸರ್ಕಾರ ಈ ಅನುದಾನವನ್ನು ಸ್ಥಗಿತಗೊಳಿಸಿದೆ, ಅಭಿವೃದ್ದಿ ಕಾರ್ಯಗಳೂ ನಿಂತಿದ್ದು,ಜಿಲ್ಲೆಯಲ್ಲಿ ಮಂತ್ರಿಗಳ ಕಾರು ಮಾತ್ರ ಓಡುತ್ತಿದೆ ಎಂದ ಅವರು ಕೇಂದ್ರ ಸರ್ಕಾರದ ಕಾಮಗಾರಿಗಳನ್ನು ಜಿಲ್ಲೆಯ ಮಂತ್ರಿಗಳು, ಕಾಂಗ್ರೇಸ್ ಶಾಸಕರು ಸ್ವತಃ ಉದ್ಘಾಟನೆ ಮಾಡುವ ಮೂಲಕ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎತ್ತಿನಹೊಳೆ ಹೋರಾಟ ನಿರಂತರ..
ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಮತ್ತು ವಿಧಾನಪರಿಷತ್ ನ ಚುನಾವಣೆಯ ಹಿನ್ನೆಲೆಯಲ್ಲಿ ಹೋರಾಟಕ್ಕೆ ವಿಶ್ರಾಂತಿ ದೊರೆತಿತ್ತು. ಆದರೆ ಯಾವುದೇ ಕಾರಣಕ್ಕೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ, ಯೋಜನೆಯಲ್ಲಿ ಆಗಿದೆ ಎನ್ನಲಾದ ಅವ್ಯವಹಾರವನ್ನು ತನಿಖೆ ನಡೆಸಬೇಕು ಮತ್ತು ಜಿಲ್ಲೆಯ ಜನಪ್ರತಿನಿಧಿಗಳನ್ನು ಹಾಘೂ ಹೋರಾಟಗಾರರನ್ನು ಮುಖ್ಯಮಂತ್ರಿಗಳು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿ, ಅದರಂತೆ ಮುಂದಿನ ಯೋಜನೆ ರೂಪಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದರು. ಎತ್ತಿನ ಹೊಳೆ ವಿಚಾಋವಾಗಿ ಜಿಲ್ಲೆಯಿಂದ ತನ್ನ ನೇತೃಥ್ವದಲ್ಲಿ ಕೇಂದ್ರ ಸಚಿವರಾದ ಉಮಾಭಾರತಿ ಹಾಗೂ ಜಾವೆಡ್ಕರ್ ಅವರನ್ನು ಭೇಟಿ ಮಾಡಲು ತೆರಳಿದ ನಿಯೋಗದ ಬಗ್ಗೆ ಕಾನೂನು ಸಚಿವರಿಗೆ ಮಾಹಿತಿ ಇಲ್ಲದಿರುವುದು ನಿಜ, ಇದು ತನ್ನಿಂದಾದ ತಪ್ಪು, ಇದನ್ನು ಅವರೊಂದಿಗೆ ಮಾತುಕತೆ ನಡೆಸಿ ಇತ್ಯರ್ಥಪಡಿಸುತ್ತೇನೆ, ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ನಳಿನ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ..
ಮುಂದಿನ ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷದಿಂದ ವೀಕ್ಷಕರನ್ನು ನೇಮಕಮಾಡಲಾಗಿದ್ದು, ಅವರು ಪ್ರತೀಕ್ಷೇತ್ರಕ್ಕೆ ತೆರಳಿ ಕಾರ್ಯಕರ್ತರ ಅಭೀಪ್ರಾಐ ಪಡೆದು ಸಂಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುತ್ತಾರೆ, ಜಿಲ್ಲಾಘಟಕ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದ್ದು, ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಜ.12 ರ ವೇಳೆಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದವರು ತಿಳಿಸಿದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್, ಸುಲೋಚನಾ ಭಟ್, ದೇವದಾಸ ಶೆಟ್ಟಿ, ರಾಮದಾಸ್ ಬಂಟ್ವಾಳ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಂಸದ ನಳಿನ್ ಕುಮಾರ್ ಕಟೀಲು ಅವರು ಸಂಗಬೆಟ್ಟು, ಸರಪಾಡಿ, ಗೋಳ್ತಮಜಲು, ಸಜಿಪ ಮುನ್ನೂರು ಜಿಲ್ಲಾಪಂಚಾಯತ್ ಕ್ಷೇತ್ರಗಳಿಗೆ ಭೇಟಿ ನೀಡಿದರು.

By suddi9

Leave a Reply

Your email address will not be published. Required fields are marked *