ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಿಂದ ಹೊರಗೆ ಬರುತ್ತಿದ್ದ ಗುತ್ತಿಗೆದಾರರೊಬ್ಬರನ್ನು ತಡೆದು ನಿಲ್ಲಿಸಿದ ತಂಡವೊಂದು ಅವರ ಕಾರು ಮತ್ತು ರೂ 4ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾದ ಘಟನೆ ಬುಧವಾರ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
30btl-police

30btl-bankಇಲ್ಲಿನ ಮೂಡುಪಡುಕೋಡಿ ಗ್ರಾಮದ ನರ್ವಲ್ದಡ್ಡ ನಿವಾಸಿ ಗುತ್ತಿಗೆದಾರ ಮೋಹನ ಶೆಟ್ಟಿ ಎಂಬವರು ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಲಾಕರ್‍ನಲ್ಲಿ ಚಿನ್ನಾಭರಣ ಇರಿಸಿದ್ದರು ಎನ್ನಲಾಗಿದೆ. ಇವರು ಮಂಗಳವಾರ ಬೆಳಿಗ್ಗೆ ಸುಮಾರು 11.30 ಗಂಟೆಗೆ ಲಾಕರ್‍ನಿಂದ ಚಿನ್ನಾಭರಣ ಪಡೆದು ರಸ್ತೆ ಬದಿ ಇರಿಸಿದ್ದ ತನ್ನ ಮಾರುತಿ ಸ್ವಿಫ್ಟ್ ಕಾರಿಗೆ ಏರುತ್ತಿದ್ದಂತೆಯೇ ಸ್ಥಳೀಯ ಪೊನ್ನೋಡಿ ನಿವಾಸಿ ಸುಮಿತ್ ಆಳ್ವ ನೇತೃತ್ವದ ನಾಲ್ವರು ದುಷ್ಕರ್ಮಿಗಳ ತಂಡವು ತಳವಾರು ಮತ್ತು ದೊಣ್ಣೆ ಸಹಿತ ಏಕಾಯೇಕಿ ಮುಗಿ ಬಿದ್ದಿದೆ. ಇದೇ ವೇಳೆ ತಂಡವು ಗುತ್ತಿಗೆದಾರರನ್ನು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಕಾರು ಸಹಿತ ರೂ 4ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರಿನಲ್ಲಿ ಎರಡು ಹವಳ ಮತ್ತು ಚಿನ್ನದ ನೆಕ್ಲೆಸ್ ಮತ್ತು ನಾಲ್ಕು ಬಳೆ ಮತ್ತಿತರ ರೂ 4ಲಕ್ಷ ಮೌಲ್ಯದ ಚಿನ್ನಾಭರಣ ಮಾತ್ರವಲ್ಲದೆ ವಿವಿಧ ದಾಖಲೆ ಪತ್ರಗಳಿದ್ದವು ಎಂದು ಅವರು ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಆರೋಪಿ ಸುಮಿತ್ ಆಳ್ವ ಎಂಬ ವ್ಯಕ್ತಿಗೂ ತನಗೂ ಯಾವುದೇ ರೀತಿಯ ಸಂಬಂಧ ಇಲ್ಲದಿದ್ದರೂ ಈ ಹಿಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇದೇ ವ್ಯಕ್ತಿ ನನ್ನನ್ನು ಕೊಲ್ಲಲು ಯತ್ನಿಸಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಬಂಟ್ವಾಳ ಕ್ರೈಂ ಇನ್ಸ್‍ಪೆಕ್ಟರ್ ಗಂಗಾಧರಪ್ಪ, ಎಎಸೈ ಸಂಜೀವ ಮತ್ತಿತರ ಪೊಲೀಸರು ಬುಧವಾರ ರಾತ್ರಿ ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *