ವಿಟ್ಲ: ಕರಿಕಲ್ಲು ಗಣಿಗಾರಿಕೆಯ ವೇಳೆ ಸ್ಫೋಟಗಳ ಅತಿಯಾದ ಬಳಕೆಯಿಂದ ಬಂಡೆ ಚೂರುಗಳು ಮನೆಗಳ ಮತ್ತು ನಿಲ್ಲಿಸಿದ ವಾಹನಗಳ ಮೇಲೆ ಬಿದ್ದು ಹಾನಿ ಸಂಭವಿಸಿದ ಘಟನೆ ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿ ನಡೆದಿದ್ದು, ಗ್ರಾಮಸ್ಥರು ಬುಧವಾರ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ವಿಟ್ಲ ಮೂಡ್ನೂರು ಗ್ರಾಮದ ಮಾಡತ್ತಡ್ಕ ಬೋಳಿಗದ್ದೆ ಎಂಬಲ್ಲಿರುವ ಕ್ರಷರ್ನಲ್ಲಿ ಮಂಗಳವಾರ ಸಂಜೆಗಣಿಗಾರಿಕೆಯ ಸಂದರ್ಭ ಸ್ಪೋಟಕ ಬಳಕೆ ಮಾ ಡಿದ್ದರಿಂದ ಸ್ಥಳೀಯ ನಿವಾಸಿ ಮೋನಪ್ಪ ಪೂಜಾರಿ ಅವರ ಮನೆಗೆ ಹಾನಿಯಾಗಿದ್ದು, ವಿನಯ್ ಎಂಬವರಿಗೆ ಸೇರಿದ ಕ್ವಾಲಿಸ್ ವಾಹನದ ಗಾಜುಗಳು ಪುಡಿಯಾಗಿದೆ. ಈ ಭಾಗದಲ್ಲಿ 10ಕ್ಕಿಂತಲೂ ಅಧಿಕ ಕರಿ ಕಲ್ಲಿನ ಕೋರೆಗಳು ತಲೆ ಎತ್ತಿಕೊಂಡಿದೆ. ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ಸಿಡಿಸುವ ವೇಳೆ ಭೂಮಿಯಲ್ಲಿ ನಡುಕ ಉಂಟಾಗಿ ಮನೆಗಳಲ್ಲಿ ಬಿರುಕುಕಾಣಿಸಲು ಆರಂಭವಾಗಿದೆ.
ಈ ಪ್ರದೇಶದಲ್ಲಿರುವ ಮನೆಗಳು, ಕೃಷಿ ಜಮೀನುಗಳು, ಅದಲ್ಲದೇ ಹಲವು ಮಂದಿ ಬೀಡಿಕಟ್ಟಿ ಜೀವನ ನಡೆಸುತ್ತಿದ್ದಾರೆ. ಕಾಡು, ಮರಗಳು, ಪ್ರಾಣಿ ಪಕ್ಷಿಗಳು ನಾಶ ಹೊಂದುವ ದುಸ್ಥಿತಿ ಬಂದಿದೆ. ಇಲ್ಲಿ ಹಲವು ಮನೆಗಳ ಮೇಲೆ ಕಲ್ಲಿನ ಚೂರುಗಳು ನಿರಂತರವಾಗಿ ಬೀಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಆತಂಕಪಡುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೋರೆ ಲಾರಿಗಳ ಅಬ್ಬರಕ್ಕೆ ರಸ್ತೆಗಳು ದುಸ್ಥಿತಿಗೆ !
ಕ್ರೆಷರ್ ಜಲ್ಲಿ ಸಾಗಾಟಕ್ಕೆ ಅರುವ ಬಾರೀ ಗಾತ್ರ ಲಾರಿಗಳ ಸಂಚಾರಕ್ಕೆ ಚಂದಳಿಕೆ – ಮಾಡತ್ತಡ್ಕ – ಅಜ್ಜಿನಡ್ಕ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ರಸ್ತೆಸಂಪೂರ್ಣ ದುಸ್ಥಿತಿಗೆ ಹೋಗಿದೆ. ಲಾರಿಗಳ ಸಂಚಾರಕ್ಕೆ ಬೇಕಾದ ರೀತಿಯಲ್ಲಿ ರಸ್ತೆಯನ್ನು ನಿರ್ಮಿಸದಿರುವುದರಿಂದ ರಸ್ತೆಯ ಡಾಂಬರನ್ನು ಹುಡುಕುಬೇಕಾದ ಸ್ಥಿತಿ ಇದೆ. ನಿತ್ಯ ಈ ಭಾಗದಲ್ಲಿ ನೂರಾರು ವಿದ್ಯಾಥರ್ಿಗಳು ವಿಟ್ಲ, ಪುತ್ತೂರು ಶಾಲೆ ಕಾಲೇಜಿಗೆ ಹೋಗುತ್ತಿದ್ದು, ಲಾರಿಗಳ ಓಡಾಟದಿಂದ ಏಳುವ ದೂಳಿನಲ್ಲೇ ಸಂಚರಿಸಬೇಕಾಗಿದೆ. ಕೆಲವೊಂದು ಕಡೆಯಲ್ಲಿ ಲಾರಿಗಳು ಬಂದರೆ ವಿದ್ಯಾರ್ಥಿಗಳಿಗೆ ನಿಲ್ಲಲೂ ಜಾಗವಿಲ್ಲದ ಪರಿಸ್ಥಿತಿ ಇದೆ ಹಾಗೂ ನಡೆಯಲೂ ಅಸಾದ್ಯವಾದ ರಸ್ತೆಯಾಗಿ ಮಾರ್ಪಾಡಾಗುತ್ತಿದೆ.ಆದರೂ ಸ್ಥಳೀಯ ಜನಪ್ರತಿನಿಧಿಗಳಿಗೆ ದುರಸ್ಥಿ ಮಾಡಬೇಕೆಂಬ ಯೋಚನೆ ಬರಲಿಲ್ಲ.


