ಮೂಡುಬಿದರೆ: ಸಮಾಜದಲ್ಲಿ ಸಾಮರಸ್ಯದ ಜೀವನಕ್ಕೆ ಸುಶಿಕ್ಷಣ ಇಂದಿನ ಅಗತ್ಯತೆ. ಮೂಡುಬಿದರೆ ಶೈಕ್ಷಣಿಕ ಕೇಂದ್ರವಾಗಿದ್ದು, ಮೂಡುಬಿದರೆ ನಾಗರಿಕರು ಸಾಮರಸ್ಯದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಸ್ವಸ್ತಿಶ್ರೀ ಜೈನ ವಸತಿ ಪ.ಪೂ. ಕಾಲೇಜಿನ 4ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನವಿತ್ತರು.
ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಅವರು ಮಾತನಾಡಿ, ಬಡಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿರುವುದು ಉಲ್ಲೇಖನೀಯ ಸೇವೆಯಾಗಿದೆ ಎಂದು ಹೇಳಿದರು.
ಫಿಲಿಪ್ಪೈನ್ಸ್ನ `ಶಾಂತಿದೂತೆ ರಾಜಕುವರಿ’, ಅಮೇರಿಕಾದಲ್ಲಿರುವ ಮರಿಯಾ ಅಮೋರ್ ಅವರು, `ಆಸಕ್ತಿ, ವಿಶ್ವಾಸದೊಂದಿಗೆ ಅಧ್ಯಯನ ಮಾಡುವ ಜತೆಗೆ ಜೀವನದಲ್ಲಿ ಮುನ್ನಡೆ ಸಾಧಿಸುವ ಜೊತೆಗೆ ನೀವು ಕಲಿತ ವಿದ್ಯಾಲಯಗಳು, ಶಿಕ್ಷಕರನ್ನು, ಶಿಕ್ಷಣ ಪ್ರೋತ್ಸಾಹಕರನ್ನು ಹೆತ್ತವರನ್ನು ಮರೆಯಬೇಡಿ’ ಎಂದು ಕಿವಿ ಮಾತು ಹೇಳಿದರು.
ಶಾಸ್ತಾವು ಕ್ಷೇತ್ರದ ವಿಜಯನಾಥ ವಿಠಲ ಶೆಟ್ಟಿ, ಪಂಡಿತ್ಸ್ ಹೆಲ್ತ್ ರೆಸಾರ್ಟ್ನ ಲಾಲ್ ಗೋಯೆಲ್, ಹಾಸನದ ರತ್ನರಾಜಯ್ಯ, ಜೈನ ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ, ಕೆಲ್ಲಪುತ್ತಿಗೆ ಪರಾರಿ ಜಗದೀಶ ಅ„ಕಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಂಕಗಳನ್ನು ಪರಿಗಣಿಸದೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಈ ಸಂಸ್ಥೆಯು ಅತ್ಯಂತ ಕನಿಷ್ಟ ಶುಲ್ಕದಲ್ಲಿ ಪುಸ್ತಕ, ಉಡುಪು, ಊಟೋಪಚಾರ ಸಹಿತ ಶಿಕ್ಷಣ ನೀಡುವ, ಶೇ. 95ಗಿಂತ ಹೆಚ್ಚಿನ ಫಲಿತಾಂಶ ದಾಖಲಿಸುವ ಸಾಧನೆ ತೋರುತ್ತಿದೆ’ ಎಂದು ಎಂ. ಬಾಹುಬಲಿ ಪ್ರಸಾದ್ ಶ್ಲಾಘಿಸಿದರು.
ಸಂಸ್ಥೆ ಮಾತ್ರವಲ್ಲದೆ ಮೂಡುಬಿದರೆ ಪರಿಸರದ ವಿವಿಧ ವಿದ್ಯಾಸಂಸ್ಥೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಟ್ಟಾರಕ ಶ್ರೀಗಳು ಬಹುಮಾನ ವಿತರಿಸಿದರು.
ಹಿರಿಯರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ, ರಜತ ಪದಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆ ತೋರಿದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಭಾಸ್ಕರ ಆಚಾರ್ಯ ಅವರನ್ನು ಭಟ್ಟಾರಕ ಶ್ರೀಗಳು ಪುರಸ್ಕರಿಸಿದರು.
ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಸುಷ್ಮಾ ವರದಿ ವಾಚಿಸಿದರು. ನೇಮಿರಾಜ ನಿರೂಪಿಸಿದರು. ರಮ್ಯ ವಂದಿಸಿದರು.
