ಬಂಟ್ವಾಳ: ಸಮಾಜದಲ್ಲಿ ಸಾಮರಸ್ಯಕ್ಕೆ ಶಕ್ತಿ ನೀಡುವ ಕೆಲಸ ಆಗಬೇಕು. ಅದಕ್ಕಾಗಿ ಜಾತಿ, ಧರ್ಮಗಳನ್ನು ಪ್ರೀತಿಸುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅವರು ಸೋಮವಾರ ಪಾಣೆಮಂಗಳೂರು ಬ್ಲಾಕ್ ಬಡಗ ಬೆಳ್ಳೂರು ವಲಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸೈದ್ದಾಂತಿಕವಾಗಿ ಕಾಂಗ್ರೆಸ್ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಇನ್ನಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಕಾರ್ಯದರ್ಶಿ ಶಾಕೀರ್, ಅಲ್ಪಸಂಖ್ಯಾತ ಘಟಕದ ಬಿ.ಕೆ.ಇದ್ದಿನಬ್ಬ, ಬಡಗ ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ಬಟ್ಟಾಜೆ, ಉಪಾಧ್ಯಕ್ಷ ಯೋಗೀಶ್, ಬಡಗ ಬೆಳ್ಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ವಸಂತ ಮತ್ತಿತರರು ಹಾಜರಿದ್ದರು.
ಇತ್ತೀಚೆಗೆ ತಾಲೂಕಿನಲ್ಲಿ ನಡೆದ ಹತ್ಯೆ ಹಾಗೂ ಕೋಮುಗಲಭೆ ಪ್ರಕರಣಕ್ಕೆ ನಾನೇ ಕಾರಣ ಎನ್ನುವ ರೀತಿಯಲ್ಲಿ ಅಪಪ್ರಚಾರಗಳು ನಡೆಯುತ್ತಿದೆ. ಇದರಿಂದ ನನ್ನ ಮನಸ್ಸಿಗೆ ತೀವ್ರ ಬೇಸರವಾಗಿದೆ. ಹತ್ಯೆ ನಡೆಸಿದವರು ಹಾಗೂ ನಡೆಸಲು ಪ್ರೇರಣೆ ನೀಡಿದವರಿಗೆ ದೇವರು ಸರಿಯಾದ ಶಿಕ್ಷೆ ನೀಡಲಿ. ಒಂದು ವೇಳೆ ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿ ನಾನು ಒತ್ತಡ ಹಾಕಿದ್ದೇನೆಂದಾದರೆ ನನಗೂ ದೇವರು ಶಿಕ್ಷೆ ನೀಡಲಿ ಎಂದು ಸಚಿವ ರಮನಾಥ ರೈ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಾನದಲ್ಲಿ ನಿಂತು ಪ್ರಾರ್ಥಿಸಿದರು. ಮಾತ್ರವಲ್ಲದೆ ಕಣ್ಣೀರು ಹಾಕಿ ಭಾವುಕರಾದರು.
