ಬಂಟ್ವಾಳ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ, ಇದರೊಂದಿಗೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಈ ಜಿಲ್ಲೆಯ ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚಿನ ಬಲ ನೀಡುವ ಕಾರ್ಯ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
BTW_DCE14_1
ಅವರು ಸೋಮವಾರ ಪಾಣೆಮಂಗಳೂರು ಬ್ಲಾಕ್ ಕರಿಯಂಗಳ ವಲಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸುತ್ತಿದೆ. ಜಿಲ್ಲೆಯ ಪ್ರತೀ ಕ್ಷೇತ್ರಗಳಲ್ಲೂ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಆದರೆ ಇದನ್ನು ಸಹಿಸದ ಕೆಲವರು ವ್ಯಂಗ್ಯವಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಸಮಾಜಕ್ಕೆ ಕಾನೂನುಬದ್ದ ಅವಕಾಶಗಳನ್ನು ನೀಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಜನರನ್ನು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮೋಸ ಮಾಡಲು ಹೊರಟಿದೆ. ಆದರೆ ಬಿಹಾರ, ಗುಜರಾತ್, ದೆಹಲಿ ಚುನಾವಣೆಯಲ್ಲಿ ಮತದಾರ ಇದಕ್ಕೆ ತಕ್ಕ ಉತ್ತರ ನೀಡಿದ್ದಾನೆ ಎಂದರು.

ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಕರಿಯಂಗಳ ಗ್ರಾಮವ್ಯಾಪ್ತಿಯಲ್ಲಿ ಸಚಿವ ರಮನಾಥ ರೈಯವರ ಮುತುವರ್ಜಿಯಲ್ಲಿ ನಡೆದ ಹಲವಾರು ಅಭಿವೃದ್ದಿ ಕಾರ್ಯಗಳು ನಮ್ಮ ಕಣ್ಣ ಮುಂದೆಯೇ ಇದೆ. ಮುಂದಿನ ಚುನಾವಣೆಗೆ ಪಕ್ಷದ ಎಲ್ಲಾ ಕಾರ್ಯಕರ್ತರು ಅವಿರತ ಶ್ರಮ ವಹಿಸಿ ಪಕ್ಷಕ್ಕಾಗಿ ದುಡಿಯಬೇಕು, ಇದೊಂದು ಮಹತ್ವದ ಚುನಾವಣೆಯೆಂದು ಪರಿಗಣಿಸಿ ಕಾಂಗ್ರೆಸ್ನ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರತಿಜ್ಞೆ ಮಾಡಬೇಕು ಎಂದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಕಾರ್ಯದರ್ಶಿ ಶಾಕೀರ್, ಅಲ್ಪಸಂಖ್ಯಾತ ಘಟಕದ ಬಿ.ಕೆ.ಇದ್ದಿನಬ್ಬ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್, ಕರಿಯಂಗಳ ವಲಯ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಆಚಾರ್, ಚಂದ್ರಹಾಸ ಮತ್ತಿತರರು ಹಾಜರಿದ್ದರು. ಇದಕ್ಕಿಂತ ಮೊದಲು ಸಚಿವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *