ಬಂಟ್ವಾಳ: “ನೇತ್ರಾವತಿ ನದಿ ತಿರುವು ಯೋಜನೆ-ಇದು ನನ್ನ ಚಿಂತನೆ” ಪರಿಕಲ್ಪನೆಯಡಿ ಬಂಟ್ವಾಳ ಮೀಡಿಯಾ ನೆಟ್ವರ್ಕ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೇತ್ರಾವತಿ ಪ್ರಶಸ್ತಿ ಪ್ರದಾನ ಮತ್ತು ಕೃತಿ ಬಿಡುಗಡೆ ಸಮಾರಂಭ ಭಾನುವಾರ ಸಂಜೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆಯ ಹಸಿರು ಅಂಗಳದಲ್ಲಿ ನಡೆಯಿತು.

1 (3)

2 (3)

3 (2)

 

ಅಂಕಣಕಾರ ಡಾ.ನರೇಂದ್ರ ರೈ ದೇರ್ಲ ಪ್ರಶಸ್ತಿ ಪ್ರದಾನ ಮಾಡಿದರು. ನಮ್ಮದು ಬುದ್ದಿವಂತರ ಜಿಲ್ಲೆ. ಯಾವುದೇ ಶೈಕ್ಷಣಿಕ ಪಲಿತಾಂಶಗಳು ಬಂದಾಗ ದೇಶದ ಕ್ಯಾಮರಾಗಳು ಜಿಲ್ಲೆಯನ್ನು ನೋಡುತ್ತಿದೆ. ಆದರೆ ಅದೇ ನಮ್ಮ ಬುದ್ದಿವಂತಿಕೆ, ಪ್ರತಿಭೆಯನ್ನು ನೇತ್ರಾವತಿಯನ್ನು ಉಳಿಸುವಲ್ಲಿ ಯಾಕೆ ಪ್ರಕಟಿಸುತ್ತಿಲ್ಲ?

ಎಂದು ಪ್ರಶ್ನಿಸಿದ ದೇರ್ಲ ಎಲ್ಲಾ ಮನುಷ್ಯರು ಕುಡಿಯುವ ನೀರಿನ ಮೂಲವಾದ ನೇತ್ರಾವತಿಯನ್ನು ಉಳಿಸುವುದಕ್ಕಾಗಿ ಎಲ್ಲಾ ರೀತಿಯ ಭೇದದ ಗೋಡೆಗಳನ್ನು ಕೆಡವಿ ಒಂದಾಗಬೇಕಾಗಿದೆ. ನೇತ್ರಾವತಿಯನ್ನು ಉಳಿಸುವ ಮೂಲಕ ನಮ್ಮ ನೆಲ, ಜಲ, ಪರಿಸರವನ್ನು ಕಾಪಾಡಬೇಕಾಗಿದೆ ಎಂದರು.

ಆಲದಪದವು ಅಕ್ಷರ ಪ್ರತಿಷ್ಠಾನ ಪ್ರಕಟಿಸಿದ ಪತ್ರಕರ್ತ ಗೋಪಾಲ ಅಂಚನ್ ಸಂಪಾದಕತ್ವದ “ನೇತ್ರಾವತಿ ನದಿ ತಿರುವು ಯೋಜನೆ-ಇದು ನನ್ನ ಚಿಂತನೆ” ಲೇಖನಗಳ ಸಂಕಲನವನ್ನು ಕಲಾವಿದ ದಿನೇಶ್ ಹೊಳ್ಳ ಬಿಡುಗಡೆ ಮಾಡಿದರು. ಯೋಜನೆಯ ಬಗ್ಗೆ ಕೃತಿಯ ಮೂಲಕ ಜಾಗೃತಿ ಮೂಡಿಸುವ ಈ ಕಾರ್ಯ ಸ್ವಾಗತಾರ್ಹವಾದದು. ನೇತ್ರಾವತಿ ನದಿ ತಿರುವು ಎಂಬ ಯೋಜನೆಗೆ ಈಗ ಎತ್ತಿನಹೊಳೆ ಯೋಜನೆ ಎಂಬ ಹೆಸರನ್ನಿಟ್ಟು ನದಿಯಲ್ಲಿ ನಮ್ಮ ರಾಜಕಾರಣಿಗಳು ‘ಆಟವಾಡುತ್ತಿದ್ದಾರೆ’. ಕಾನನ, ಶಿಖರ, ನದಿ, ಝರಿ ಎಂಬುದರ ಒಳ ನೋಟವೇ ತಿಳಿದಿರದ ನಮ್ಮ ಜನ ನಾಯಕರು ವಿಧಾನ ಸೌಧದ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನದಿಯನ್ನು ತಿರುಗಿಸಲು ಹೊರಟಿದ್ದಾರೆ. ನದಿ ಕೆಳ ದಿಕ್ಕಿನಿಂದ ಮೇಲ್ಗಡೆ ಹರಿಯುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಆದರೆ ಹಠದಿಂದ ಯೋಜನೆಯನ್ನು ಮಾಡಿಯೇ ತೀರುವುದೆಂದರೆ ಇದು ಕರಾವಳಿ ಜಿಲ್ಲೆಯ ಜನತೆಗೆ ಜನನಾಯಕರು ಮಾಡುವ ದೌರ್ಜನ್ಯ ಮತ್ತು ದಬ್ಬಾಳಿಕೆಯಾಗಿದೆ. ಪ್ರತಿಯೊಬ್ಬರೂ ಇಲ್ಲಿನ ನೆಲ, ಜಲ, ಗಿರಿ, ಝರಿಗಳನ್ನು ಉಳಿಸುವಲ್ಲಿ ಪ್ರಧಾನ ಪಾತ್ರಧಾರಿಗಳಾಗಿ ಇಲ್ಲಿನ ಪರಿಸರದ ಸಹಜ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದರು.

ಆಲದದಪವು ಅಕ್ಷರ ಪ್ರತಿಷ್ಠಾನದ ಅಧ್ಯಕ್ಷ ಡಾ| ರಾಮಕೃಷ್ಣ ಎಸ್. ಅಧ್ಯಕ್ಷತೆ ವಹಿದ್ದರು. ಆಧುನಿಕ ವೇಗದ ಭರಾಟೆಯೊಂದಿಗೆ ಬದುಕುವ ನಾವು ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುವುದು ಪೃಕೃತಿಗೆ ಎಂದೂ ಪೂರಕವಲ್ಲ. ಪೃಕೃತಿ, ಪರಿಸರ ಉಳಿದರೆ ಮಾತ್ರ ಮುಂದಿನ ಜನಾಂಗಕ್ಕೆ ಬದುಕುವ ನೆಲೆ ಇದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ಬಿ.ಸಿ.ರೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಅರಿವು ಯುವ ಸಂವಾದ ಕೇಂದ್ರದ ನಿರ್ದೇಶಕ ನಾದ ಮಣಿನಾಲ್ಕೂರು ಸ್ವಾಗತಿಸಿದರು. ಬಂಟ್ವಾಳ ಮೀಡಿಯಾ ನೆಟ್ವರ್ಕ್ ನಿರ್ದೇಶಕ ಗೋಪಾಲ ಅಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಎಚ್ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸತೀಶ್ ಕಕ್ಯಪದವು ವಂದಿಸಿದರು. ಕೃಷ್ಣಪ್ಪ ಬಂಬಿಲ, ಗಣೇಶ್ ನಾಯಕ್ ವಾಮದಪದವು, ವಸಂತ್ ಸುಪ್ರೀಂ ವಾಮದಪದವು ಸಹಕರಿಸಿದರು.

ಪ್ರಶಸ್ತಿ ಪ್ರದಾನ : “ನೇತ್ರಾವತಿ ನದಿ ತಿರುವು ಯೋಜನೆ-ಇದು ನನ್ನ ಚಿಂತನೆ” ಪರಿಕಲ್ಪನೆಯಡಿ ಬಂಟ್ವಾಳ ಮೀಡಿಯಾ ನೆಟ್ವರ್ಕ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಆಶಾ ದಿನೇಶ ನಾಯಕ ಪುತ್ತೂರು ಅವರಿಗೆ ನೇತ್ರಾವತಿ ಪ್ರಶಸ್ತಿ, ಸ್ಪರ್ಧೆಯಲ್ಲಿ ವಿಜೇತರಾದ
ಆಶಾಲತಾ ಕಾಮತ್ ಜಿ. ಮಂಗಳೂರು, ರೇಷ್ಮಾ ಭಟ್ ಮೊಡಂಕಾಪು, ಮೇಧಾ ರಾಮಕುಂಜ, ಅನಿತಾನರೇಶ್ ಮಂಚಿ, ಸ್ವೀವನ್ ರೇಗೋ ದಾರಂದಕುಕ್ಕು, ಭಾಗ್ಯಶ್ರೀ ಕಾರ್ಕಳ, ನಾರಾಯಣ ರೈ ಕುಕ್ಕುವಳ್ಳಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ ಸುಳ್ಯ, ಸುಶೋಭಿತಾ ಪಿ.ಎಸ್.ಪುತ್ತೂರು, ದಿವಾಕರ ಶಾನುಭಾಗ ಮಂಗಳೂರು ಅವರಿಗೆ ನೇತ್ರಾವತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಅರಿವು ಯುವ ಸಂವಾದ ಕೇಂದ್ರ ಬಂಟ್ವಾಳ ಹಾಗೂ ಅಕ್ಷರ ಪ್ರತಿಷ್ಠಾನ ಆಲದಪದವು ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಮನಿಸಿದ್ದು: ಯಾವುದೇ ವೇದಿಕೆ, ಸಭಾಂಗಣ ಇಲ್ಲದೆ ಮರಗಿಡಗಳ ನಡುವಿನ ಸಹಜ ನೆರಳಿನಡಿಯಲ್ಲಿ ಕಾರ್ಯಕ್ರಮ. ಅತಿಥಿಗಳಿಗೆ ಮರದ ತುಂಡುಗಳನ್ನು ಬಳಸಿ ಮಾಡಿದ ಬೆಂಚು, ಅದರ ಮೇಲೆ ಹಾಕಿದ ಚಾಪೆಯೇ ಆಸನ. ಬಾವಿಯೊಳಗಿದ್ದ ಪುಸ್ತದ ಕಟ್ಟನ್ನು ಮಣ್ಣಿನ ಮಡಕೆಯಲ್ಲಿ ನೀರೆಳೆಯುವ ಮೂಲಕ ಕೃತಿಯ ಲೋಕಾರ್ಪಣೆ. ಪರಿಸರ ಸಂಬಂಧಿ ಬರಹಗಳುಳ್ಳ ಪುಸ್ತಕಗಳು, ಬುಟ್ಟಿ, ಮುಟ್ಟಾಳೆ, ತೆಂಗಿನಕಾಯಿ, ವೀಳ್ಯ ಅಡಿಕೆ, ಬಾಳೆಹಣ್ಣು, ಸಹಜ ಹೂವಿನ ಮಾಲೆಯ ಅರ್ಪಣೆಯೊಂದಿಗೆ ಪ್ರಶಸ್ತಿ-ಪುರಸ್ಕಾರ.

By suddi9

Leave a Reply

Your email address will not be published. Required fields are marked *