ಮೂಡುಬಿದರೆ: ಮಂಗಳೂರಿನಲ್ಲಿ ನಡೆಯಲಿರುವ ಎಂಪಿಎಲ್ಗೆ ಕ್ರಿಕೆಟ್ ಪಂದ್ಯಾಟದಲ್ಲಿ ಸ್ಪರ್ಧಿಸುವ ಬೆದ್ರ ಬುಲ್ಸ್ ತಂಡವನ್ನು ಎಂಸಿಎಸ್ ಬ್ಯಾಂಕ್ನ ಕಲ್ಪವೃಕ್ಷ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಲೋಕಾರ್ಪಣೆಗೊಳಿಸಲಾಯಿತು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಮೋಹನ ಆಳ್ವ ಬೆದ್ರ ಬುಲ್ ತಂಡವನ್ನು ಲೋಕಾರ್ಪಣೆಗೊಳಿಸಿದರು. ಎಂಪಿಎಲ್ ಟೂರ್ನಿಯಲ್ಲಿ 8 ತಂಡಗಳಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯ 30 ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತಸ ತಂದಿದೆ. ಕ್ರೀಡಾ ಚಟುವಟಿಕೆಗಳನ್ನು ಬೆಳಗುತ್ತಿರುವ ಮೂಡುಬಿದರೆಗೆ ಹೊಸ ಕ್ರಿಕೆಟ್ ತಂಡ ಹೊಸ ಉತ್ಸಾಹ ನೀಡಲಿದೆ. ಕ್ರಿಕೆಟ್ ಕ್ಷೇತ್ರದಲ್ಲೂ ಮೂಡುಬಿದರೆ ತಂಡ ಹೆಸರು ಗಳಿಸಲಿ. 20 ಓವರ್ನಲ್ಲಿ ಶತಕ ಭಾರಿಸಿದರೆ 10 ಸಾವಿರ, 75 ರನ್ ಗಳಿಸಿದರೆ 5 ಸಾವಿರ, 50 ರನ್ ಗಳಿಸಿದರೆ 2 ಸಾವಿರ, 5 ವಿಕೆಟ್ ಗಳಿಸಿದರೆ 10 ಸಾವಿರ, 4 ವಿಕೆಟ್ಗೆ 5 ಸಾವಿರ, 3 ವಿಕೆಟ್ಗೆ 2 ಸಾವಿರ ಹಾಗೂ ಎಂಪಿಎಲ್ನಲ್ಲಿ ಗೆಲುವು ಸಾಧಿಸಿದರೆ, ಸಾರ್ವಜನಿಕರ ನೆರವಿನಿಂದ ಎಲ್ಲಾ ಆಟಗಾರರಿಗೆ ತಲಾ 10 ಸಾವಿರ ನೀಡುವುದಾಗಿ ಘೋಷಿಸಿದರು.
ಥೀಂ ಹಾಡು ಹಾಗೂ ಆಟಗಾರರ ಧಿರಿಸನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಕ್ರೀಡಾ ಸಚಿವ,ತಂಡದ ಮಾಲೀಕ ಕೆ.ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷ ವಹಿಸಿದ್ದರು. ಮೂಡುಬಿದರೆಯಲ್ಲಿ ಡಾ.ಎಂ ಮೋಹನ ಆಳ್ವರವರು ಕ್ರೀಡಾ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸದ ಪ್ರೇರಣೆಯಿಂದ ಇಲ್ಲಿಗೆ ಸಿಂಥೆಟಿಕ್ ಟ್ರ್ಯಾಕ್ ಸಹಿತ ವಿವಿಧ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಯಿತು. ಮಾತ್ರವಲ್ಲ ಬೆದ್ರ ಬುಲ್ಸ್ ತಂಡವನ್ನು ಕಟ್ಟಲು ಸ್ಪೂರ್ತಿಯಾಯಿತು ಎಂದರು.
ಮೂಡುಬಿದರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಎಂಪಿಎಲ್ನ ಪ್ರಾಯೋಜಕ ಆಸೀಫ್,ಬೆದ್ರ ಬುಲ್ಸ್ ತಂಡದ ವ್ಯವಸ್ಥಾಪಕ ವಿದ್ಯಾಚರಣ ಭಂಡಾರಿ, ತಂಡದ ಕೋಚ್ ಜಯಪ್ರಕಾಶ್ , ನಾಯಕ ನವೀನ್ ಎಂ.ಜಿ ಉಪಸ್ಥಿತರಿದ್ದರು. ಚಂದ್ರಹಾಸ ಸನಿಲ್ ಸ್ವಾಗತಿಸಿದರು. ವಿಜೆ ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರೂಪಿದರು.

