ಕೈಕಂಬ: ಕೇವಲ ಉಳಿತಾಯ ಮಾಡುವ ಉದ್ದೇಶದಿಂದ ಸ್ವ ಸಹಾಯ ಸಂಘಕ್ಕೆ ಸೇರಿ, ಕಾರ್ಯಕರ್ತರ ಪ್ರೇರಣೆಯಿಂದಗಿ ಸ್ವ ಉದ್ಯೋಗ ಮಾಡಲು ಪ್ರಾರಂಬಿಸಿದ ನಾವು ಈಗ ನಮ್ಮ ಸಂಸಾರಕ್ಕೆ ಬೇಕಾದ ಎಲ್ಲಾ ಅಗತ್ಯತೆಯನ್ನು ಪೂರೈಸಲು ಗಂಡಸರ ಮೇಲೆಯೇ ಅವಲಂಬಿತರಾಗದೇ ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ ಎಂದು ಅನುಭವ ಹಂಚಲು ಹಾಗೂ ತಮ್ಮ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮಾಡಲು ಯಶಸ್ವಿಯಾಗಿ ಸ್ವ ಉದ್ಯೋಗ ನಡೆಸುತ್ತಿರುವ ಸ್ವ-ಸಹಾಯ ಸಂಘದ ಸದಸ್ಯರಿಗೆ ವೇದಿಕೆ ಒದಗಿಸಿತು ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ.
ಕಂಕನಾಡಿ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಪ್ರೇರಣಾ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಮಾಸಿಕ ಸಭೆ ಹಾಗೂ ಪ್ರಜ್ಞಾ ಸಲಹಾ ಕೇಂದ್ರದ ಸ್ವ-ಸಹಾಯ ಸಂಘಗಳ ಮಹಿಳಾ ಸ್ವ-ಉದ್ಯೋಗಿಗಳ ಸಹ ಮಿಲನ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂತು.
ಸ್ವ ಉದ್ಯೋಗ ನಡೆಸುತ್ತಿರುವ ಮಹಿಳೆಯರು ತಾವು ಹೂಡಿದ ಬಂಡವಾಳ ಹಾಗೂ ಆದಾಯದ ಬಗ್ಗೆ ಮಾಹಿತಿ ನೀಡಿದರು.
ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್‍ರವರು ಕಾರ್ಯಕ್ರಮದ ಉದ್ದೇಶ ಹಾಗೂ ಪ್ರಜ್ಞಾ ಸಲಹಾ ಕೇಂದ್ರದ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಯೋಜನೆಯ ಮೂಲಕ ನೀಡಲಾಗುವ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಒಕ್ಕೂಟದ ಅಧ್ಯಕ್ಷೆ ಶೋಭಾ ಶೆಟ್ಟಿ, ಕಾರ್ಯದರ್ಶಿ ಸುನೀತಾ ಡಿಸೋಜ, ಪ್ರಜ್ಞಾ ಸಲಹಾ ಕೇಂದ್ರದ ರೇಶ್ಮಾ ಜೋಗಿರವರು ಉಪಸ್ಥಿತರಿದ್ದರು. ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ 25 ಮಹಿಳಾ ಸ್ವ ಉದ್ಯೋಗಿಗಳು ಪ್ರಜ್ಞಾ ಸಲಹಾ ಕೇಂದ್ರದ ಕಾರ್ಯಕರ್ತರು, ಸ್ವ ಸಹಾಯ ಸಂಘದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
