ಮಂಗಳೂರು: ತುಳು ಚಿತ್ರರಂಗ ಚರಿತ್ರೆಯಲ್ಲಿಯೇ ಚಾಲಿಪೋಲಿಲು ಇತಿಹಾಸ ಬರೆದಿದೆ. ಡಿ. 4ರಂದು ಈ ಸಿನೆಮಾ 400ನೇ ದಿನದ ಪ್ರದರ್ಶನ ಕಾಣುವ ಮೂಲಕ ಅತ್ಯದ್ಭುತ ದಾಖಲೆಯೊಂದಿಗೆ ಹೊಸ ಇತಿಹಾಸ ನಿರ್ಮಾಣ ಮಾಡಿರುವುದು ತುಳುವರೆಲ್ಲರಿಗೂ ಸಂತಸ, ಸಂಭ್ರಮದ ವಿಷಯ.
ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣ ಮತ್ತು ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ಚಾಲಿಪೋಲಿಲು ಈಗಾಗಲೇ ಸಾರ್ವತ್ರಿಕವಾಗಿ ಶ್ಲಾಘನೆಗೆ ಪಾತ್ರವಾಗಿದ್ದು, ಈಗಲೂ ಪಾಂಡೇಶ್ವರದ ಪಿವಿಆರ್ನಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. 5 ಚಿತ್ರಮಂದಿರಗಳಲ್ಲಿ 75 ದಿನ ಮತ್ತು 3 ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಂಡಿರುವ ಈ ಸಿನೆಮಾವು ತುಳು ಚಿತ್ರರಂಗಕ್ಕೆ ಹೊಸ ಗೌರವ ತಂದುಕೊಟ್ಟಿದ್ದು, ತುಳುವರಿಗೆ ಹೆಮ್ಮೆಯ ಕಿರೀಟ ತೊಡಿಸಿದೆ. ಉತ್ತಮ ಸಿನೆಮಾಗಳಿಗೆ ಪ್ರೇಕ್ಷಕರ ಬೆಂಬಲವಿದೆ ಎಂಬುದಕ್ಕೆ ಈ ಸಿನೆಮಾ ಉತ್ತಮ ಸಾಕ್ಷಿ.
ತುಳುನಾಡಿನ ನಾಡಿಮಿಡಿತಕ್ಕೆ ಹೊಂದಿಕೊಂಡು, ತುಳುವರ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸಿರುವ ಚಾಲಿಪೋಲಿಲು ತುಳುನಾಡಿನ ಪ್ರಾಕೃತಿಕ ಶ್ರೀಮಂತಿಕೆಯನ್ನು ಪ್ರೇಕ್ಷಕರ ಮುಂದಿಟ್ಟಿದೆ. ಅಶ್ಲೀಲ, ದ್ವಂದ್ವಾರ್ಥರಹಿತವಾಗಿಯೂ ಉತ್ತಮ ಹಾಸ್ಯ ಸಾಧ್ಯ ಎಂಬುದಕ್ಕೆ ಈ ಸಿನೆಮಾ ಸಾಕ್ಷಿಯಾಗುತ್ತದೆ. ಕೋಮು ಹೆಸರಲ್ಲಿ ದಂಗೆ ಎಬ್ಬಿಸುವವರು ಈ ಚಿತ್ರವನ್ನು ನೋಡಿದರೆ ಅವರ ಮನಸ್ಸು ಒಂದಿಷ್ಟಾದರೂ ಬದಲಾಗದೆ ಇರದು. ಶ್ರೇಷ್ಠ ಗುಣಮಟ್ಟ, ಪ್ರಬುದ್ಧ ಅಭಿನಯ ಈ ಸಿನೆಮಾದ ಹೆಚ್ಚುಗಾರಿಕೆ.
ಚಾಲಿಪೋಲಿಲು ಈಗಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದರಿಂದ ಇನ್ನೂ ಹಲವು ದಿನಗಳ ಕಾಲ ಚಿತ್ರ ಮಂದಿರದಲ್ಲಿ ಮುಂದುವರಿಯುವುದು ಸ್ಪಷ್ಟ. ಈ ಸಿನೆಮಾ ನಿರ್ಮಿಸಿದ ದಾಖಲೆ, ಬರೆದ ಇತಿಹಾಸವನ್ನು ಅಳಿಸುವುದು ಕಷ್ಟಸಾಧ್ಯ ಎಂದೇ ಚಿತ್ರರಂಗದ ಪರಿಣಿತರು ಹೇಳುತ್ತಿದ್ದಾರೆ.
ಚಾಲಿಪೋಲಿಲು ಚಿತ್ರತಂಡದಿಂದ ನಿರ್ಮಾಣವಾದ ಹೊಸ ತುಳು ಚಿತ್ರ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದ ದಬಕ್ ದಬಾ ಐಸಾ ಎಪ್ರಿಲ್ ತಿಂಗಳಿನಲ್ಲಿ ತೆರೆಕಾಣಲಿದೆ.


