ಬಂಟ್ವಾಳ: ಮನುಷ್ಯನ ಜೀವನದ ಪ್ರತಿಯೊಂದು ಕ್ಷಣವೂ ಭಾರೀ ಅಮೂಲ್ಯವಾಗಿದ್ದು, ಇದನ್ನು ನೆಮ್ಮದಿಯಿಂದ ಅನುಭವಿಸಲು ಯುವಜನತೆ ಕೆಟ್ಟ ಹವ್ಯಾಸ ಮತ್ತು ದುಶ್ಚಟಗಳಿಂದ ದೂರ ಇರಬೇಕು. ಇದರಿಂದಾಗಿ ಕೆಲವೊಂದು ಮಾರಕ ರೋಗಗಳನ್ನು ತಪ್ಪಿಸಿ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಿದೆ ಎಂದು ಜಿಲ್ಲಾ ಮಲೇರಿಯಾ ಪರಿವೀಕ್ಷಣಾಧಿಕಾರಿ ಜಯರಾಮ ಪೂಜಾರಿ ಹೇಳಿದ್ದಾರೆ.

ತಾಲ್ಲೂಕಿನ ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ವಿಶ್ವ ಏಡ್ಸ್ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಕೆ.ಸರಸ್ವತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನಲ್ಲಿ ಉತ್ತಮ ಚಿಂತನೆಯೊಂದಿಗೆ ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಮಾರಕ ರೋಗಗಳಿಂದ ದೂರ ಉಳಿದು ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಯುವಜನತೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಎನ್ಎಸ್ಎಸ್ ಘಟಕ ಸದಸ್ಯೆ ಹರ್ಷಿತಾ ಸ್ವಾಗತಿಸಿ, ಸದಸ್ಯೆ ಶರ್ಮಿಳಾ ವಂದಿಸಿದರು. ಯೋಜನಾಧಿಕಾರಿ ಬಾಲಕೃಷ್ಣ ನಾಕ್ ಕೆ. ಬೆಳ್ಳಾರೆ ನಿರೂಪಿಸಿದರು.
