ಮುಂಬಯಿ: ರೋಹಿತ್ ಶರ್ಮಾ ಅರ್ಧಶತಕ (ಔಟಾಗದೆ 59) ಹಾಗೂ ಹರ್ಭಜನ್ ಸಿಂಗ್ (33ಕ್ಕೆ2) ಪ್ರಭಾವಿ ಬೌಲಿಂಗ್ ದಾಳಿಯಿಂದ ಮೇಲುಗೈ ಸಾಧಿಸಿದ ಮುಂಬಯಿ ಇಂಡಿಯನ್ಸ್ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 19 ರನ್ಗಳ ಜಯ ತನ್ನದಾಗಿಸಿಕೊಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ಮುಂಬಯಿ ಇಂಡಿಯನ್ಸ್ ತನ್ನ ಪಾಲಿನ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ಗಳ ಶಿಖರ ನಿರ್ಮಿಸಿತು. ಬಳಿಕ ಬ್ಯಾಟ್ ಮಾಡಿದ ಪ್ರವಾಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 8 ವಿಕೆಟ್ಗೆ 168 ರನ್ ಗಳಿಸುವಷ್ಟೇ ಸಾಧ್ಯವಾಗಿ ಸೋಲಿಗೆ ಶರಣಾಯಿತು.

ಮುಂಬಯಿ ಇಂಡಿಯನ್ಸ್ ಪರ ಜಸ್ ಪ್ರೀತ್ ಬುಮ್ರಾಹ್ (22ಕ್ಕೆ2), ಲಸಿತ್ ಮಾಲಿಂಗ (29ಕ್ಕೆ2) ಹಾಗೂ ಪವನ್ ಸುಯಲ್ (35ಕ್ಕೆ1) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ ತಂಡದ ಗೆಲುವಿಗೆ ಬಲವಾದರು. ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ (35) ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ (38) ಹೋರಾಟ ಪ್ರದರ್ಶಿಸಿದರು.
ಇದಕ್ಕೂ ಮುನ್ನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಮುಂಬಯಿ ಪಡೆ ಆತ್ಮ ವಿಶ್ವಾಸದ ಆರಂಭ ಪಡೆಯಿತು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಆರಂಭಿಕರಾಗಿ ಕಣಕ್ಕಿಳಿದ ಸಿ.ಎಮ್ ಗೌತಮ್ 28 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಭರ್ಜರಿಯ ಸಿಕ್ಸರ್ ಒಳಗೊಂಡಂತೆ 30 ರನ್ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ನ್ ಬೆನ್ ಡಂಕ್ ಕೇವಲ 15 ರನ್ ಕಾಣಿಕೆ ನೀಡುವಷ್ಟೇ ಶಕ್ತರಾದರು.
