ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ನಂ. 12ರಂದು ಹತ್ಯೆಯಾದ ಹರೀಶನ ಕೊಲೆ ಕೇಸಿನ ತನಿಖೆಯ ಕುರಿತು ಸಂಶಯ ಇರುವುದರಿಂದ ಈ ಕೇಸಿನ ತನಿಖೆಯನ್ನು ಸಿಬಿಐ ಗೆಅಥವಾ ನ್ಯಾಯಾಂಗ ಕ್ಕೆ ನೀಡ ಬೇಕೆಂದು ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಗ್ರಾ.ಪಂ. ಸದಸ್ಯ ಸದಾನಂದ ಹಳೆಗೇಟು ಹಾಗೂ ಮೃತ ಹರೀಶನ ಕುಟುಂಬಿಕರು ಮತ್ತು ನಾವೂರು ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಲಾಯಿತು.

ಹರೀಶ ಎಂಬವರು ಮೃತ ಪಟ್ಟು, ಸಮೀವುಲ್ಲಾ ಎಂಬವರು ಗಾಯಗೊಂಡಿದ್ದಾರೆ. ಇದರ ತನಿಖೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದ್ದು, ಈ ತನಿಖೆಯು ಸಂಶಯದ ಸ್ಥಿತಿಯಲ್ಲಿದ್ದು, ಈ ತನಿಖೆಯನ್ನು ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ ನಡೆಸುತ್ತಿದೆ. ಕೊಲೆಯಾಗಿ 20 ದಿನ ಆದರೂ ಕೊಲೆಯಾದ ಪರಿಸರದಲ್ಲಿ ಯಾರೊಬ್ಬರ ವಿಚಾರಣೆ ನಡೆದಿಲ್ಲ. ಹಲವಾರು ಸಾಕ್ಷಿಗಳು ಸ್ಥಳದಲ್ಲಿ ಇದ್ದರೂ, ಈ ಬಗ್ಗೆ ವಿಚಾರಣೆ ನಡೆದಿಲ್ಲ. ಸ್ಥಳದಲ್ಲಿ ದೊರೆತ ಚಾಕುವನ್ನು ಪಿಂಗರ್ ಪ್ರಿಂಟಿಗೆ ಕಳುಹಿಸಿಲ್ಲ. ಪ್ರಕರಣ ನಡೆದ 3ನೇ ದಿನ ಸ್ಥಳ ಮಾಹಜರು ಮಾಡಿರುವುದು, ಗಾಯಗೊಂಡ ಸಮೀವುಲ್ಲಾರ ಹೇಳಿಕೆಯಂತೆ ಕೊಲೆಎಗಡುಕರು ಓಮಿನಿ ವಾಹನದಲ್ಲಿ ಬಂದಿರುವುದೆಂದು ನಿರ್ಧರಿಸಿರುತ್ತಾರೆ. ಆದರೆ ಅಲ್ಲಿ ವಾಹನ ನೋಡಿದವರು ಇಕೋ ಎಂದು ಹೇಳುತ್ತಿದ್ದಾರೆ. ಅಲ್ಲದೆ ಪೊಲೀಸರು ಬಂಧಿಸರುವ ಮೂರು ಮಂದಿಯ ಮೇಲೆ 12ನೇ ತಾರೀಕಿಗೆ ಸಂಜೆ ನಡೆದ ಕಲ್ಲು ತೂರಾಟದಲ್ಲಿ ಕೇಸು ದಾಖಲಾಗಿದೆ. ಅಲ್ಲದೇ ಈಗಾಗಲೇ ಬಂಧಿಸಿದ ಆರೋಪಿಗಳು ಕೊಲೆಯಾದ ಹೊತ್ತಿನಲ್ಲಿ ಬಿ.ಸಿ.ರೋಡಿನಲ್ಲಿ ಇದ್ದದ್ದನ್ನು ನೋಡಿದವರು ಇದ್ದಾರೆ. ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ತನಿಖೆಯನ್ನು ಮಾಡದೆ ಪೂರ್ವ ನಿಯೋಜಿತವಾಗಿ ವರ್ತಿಸಿದ ರೀತಿ ತನಿಖೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
