ಮೂಡುಬಿದರೆ: ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡ, ಮೇಘನಾದ್ ಶೆಟ್ಟಿ ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತನ್ನ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮೂಡುಬಿದರೆ ಶಾಸಕ ಅಭಯಚಂದ್ರ ಜೈನ್ ಅವರಿಗೆ ನೀಡಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಮೇಘನಾದ್ ಶೆಟ್ಟಿ, ತಾನು ಪಕ್ಷದಲ್ಲಿ ಸುಮಾರು 20 ವರ್ಷದಿಂದ ದುಡಿಯುತ್ತಿದ್ದೇನೆ. ಆದರೆ ನನಗೆ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ. ಪ್ರತಿಹಂತದಲ್ಲೂ ನಾಯಕರ ಗಮನ ಸೆಳೆದು, ಪಕ್ಷದ ಬಲವರ್ಧನೆ ಮಾಡಿದರೂ, ನನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಸಾಮಾನ್ಯ,ಸಕ್ರಿಯ ಕಾರ್ಯಕರ್ತನಾಗಿ ಮುಂದುವರಿಯುವೆ ಎಂದು ತಿಳಿಸಿದ್ದಾರೆ.
ಮೇಘನಾಥ ಶೆಟ್ಟಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದ.ಕ.ಜಿಲ್ಲಾ ಕಾರ್ಯದರ್ಶಿಯಾಗಿ, ಕಾಂಗ್ರೆಸ್ ರಾಜ್ಯ ಕಿಸಾನ್ ಘಟಕದ ಪದಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
