ಬಂಟ್ವಾಳ: ಜಿಲ್ಲೆಯಲ್ಲಿ ಶಾಂತಿ ಮಾಯವಾಗಿದೆ ಎಲ್ಲೆಲ್ಲೂ ಸಂಘರ್ಷದ ವಾತಾವರಣ ಕಂಡುಬರುತ್ತಿದ್ದು, ಪ್ರಜ್ಞಾವಂತ ಸಮಾಜ ಎಚ್ಚೆತ್ತು ಪರಸ್ಪರ ಸೌಹಾರ್ದತೆ ಕಾಯ್ದುಕೊಳ್ಳಲು ಶ್ರಮಿಸಬೇಕು ಎಂದು ದಲಿತ ಮುಖಂಡ ಜನಾರ್ಧನ ಚೆಂಡ್ತಿಮಾರ್ ಆಗ್ರಹಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ರಾಜಕೀಯ ಪ್ರೇರಿತ ಮತ್ತು ಪೂರ್ವದ್ವೇಷದಿಂದ ಉಂಟಾಗುತ್ತಿರುವ ಹಲವು ಘರ್ಷಣೆಗಳಿಗೆ ಅಮಾಯಕರು ಬಲಿಯಾಗುತ್ತಿದ್ದು, ಇನ್ನುಮುಂದೆ ಇಂತಹಾ ಘಟನೆಗಳು ಸಂಭವಿಸದಂತೆ ಸಂಘಟನೆಗಳು, ಪಕ್ಷಗಳು ಹೆಚ್ಚು ಮುತವರ್ಜಿ ವಹಿಸಬೇಕು. ಸಾಮಾಜಿಕ ಅಶಾಂತಿಗೆ ಕಾರಣವಾದ ಹೇಳಿಕೆಗಳನ್ನು ನೀಡಬಾರದು ಎಂದು ಆಗ್ರಹಿಸಿದ ಅವರು, ಹತ್ಯೆಯಂತಹಾ ದುರ್ಘಟನೆಗಳು ನಡೆದಾಗ ಅಮಾಯಕರ ಬಂಧನವಾದಲ್ಲಿ ಅದೂ ಕೂಡ ಖಂಡನೀಯವಿಚಾರ ಎಂದರು.
ನಾವೂರು ಹಳೆಗೇಟು ಎಂಬಲ್ಲಿ ಇತ್ತೀಚೆಗೆ ನಡೆದ ಹರೀಶ ಪೂಜಾರಿ ಹತ್ಯೆ ಪ್ರಕರಣದಲ್ಲಿಯೂ, ಪೊಲೀಸ್ ಇಲಾಖೆ ಪ್ರಮುಖ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ ವಿಚಾರ ಎಂದ ಅವರು, ಪೊಲೀಸರ ಈ ನಡೆಯನ್ನು ಪ್ರಶ್ನಿಸುವ ಭರದಲ್ಲಿ ಮತ್ತೊಮ್ಮೆ ಜಿಲ್ಲೆಯಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಜಾಗೃತ ಸಮಾಜ ಎಚ್ಚರಿಕೆ ಹೆಜ್ಜೆ ಇಡುವಂತೆ ಅವರು ಒತ್ತಾಯಿಸಿದರು.
ಕಳೆದ ಕೆಲವು ವರ್ಷಗಳ ಹಿಂದೆ ಕಾವಳಮೂಡೂರು ಎಂಬಲ್ಲಿ ನಡೆದ ದಲಿತ ಮುಖಂಡ ಶಿವಪ್ಪ ಬಂಗೇರ ಹತ್ಯೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಈಗಾಗಲೇ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರೂ ಇನ್ನೂ ನೈಜ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಸಮಾಜದಲ್ಲಿ ಬಲಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಹತ್ಯೆಗೀಡಾದರೆ ಅಂತಹ ಮನೆಗೆ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳು ದೌಡಾಯಿಸಿ ಪರಿಹಾರಧನ ವಿತರಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಕೂಡಾ ಪೊಲೀಸರು ವಿಶೇಷ ಮುತುವರ್ಜಿ ವಹಿಸುತ್ತಾರೆ. ಇನ್ನೊಂದೆಡೆ ದುರ್ಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಹತ್ಯೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಪೊಲೀಸ್ ಇಲಾಖೆಯಲ್ಲಿ ತೀರಾ ನಿರ್ಲಕ್ಷ್ಯ ಮನೋಭಾವ ಎದ್ದು ಕಾಣುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಮೋಹನ ಚೆಂಡ್ತಿಮಾರ್, ಸದಾನಂದ ನಾವೂರು, ರಾಜೀವ ಕಕ್ಯಪದವು ಮತ್ತಿತರರು ಇದ್ದರು.
