ಮೂಡುಬಿದರೆ: ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಸದಾ ಭ್ರಷ್ಠಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಕಾರ್ಮಿಕ ವಿರೋಧಿಯಾಗಿದ್ದಾರೆ. ಕಾರ್ಮಿಕರಿಗೆ ಅಗತ್ಯವಾಗಿ ಬೇಕಾಗಿರುವ ಹಲವು ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಅಥವಾ ಸರಕಾರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಸಿಐಟಿಯು ವಲಯ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಒತ್ತಾಯಿಸಿ ಸೋಮವಾರ ಮೂಡುಬಿದರೆ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದವು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ರಮಣಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಇದರಿಂದ ಕಟ್ಟಡ ಸಹಿತ ಇತರ ಕಾರ್ಮಿಕರು ಜೀವನ ನಡೆಸಲು ಕಷ್ಟ ಸಾಧ್ಯವಾಗುತ್ತಿದೆ. ಅಲ್ಲದೆ ಅವರಿಗೆ ಬೀಡಿ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಕಳೆದ ಒಂದು ವರ್ಷಗಳಿಂದ ತಡೆ ಹಿಡಿದಿದೆಯಲ್ಲದೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೇರಿಕೊಂಡು ಬೀಡಿ ಉದ್ಯಮವನ್ನು ನಾಶ ಮಾಡಲು ಹೊರಟಿದೆ. ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಬೀಡಿ ಕಾರ್ಖಾನೆಗಳನ್ನು ನಿಲ್ಲಿಸಬಾರದೆಂದು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಅವರು ಕಟ್ಟಡ ಕಾರ್ಮಿಕರಿಗೆ ಸವಲತ್ತುಗಳು ಕಲ್ಯಾಣ ಮಂಡಳಿಯಿಂದ ಕಾನೂನು ಬದ್ಧವಾಗಿ ಜಾರಿಗೊಳಿಸಿ ಕಾರ್ಮಿಕರ ಅಭಿವೃದ್ಧಿಗೆ ಸಹಾಯ ಮಾಡಬೇಕು. ಅಸಂಘಟಿತ ಕಾರ್ಮಿಕರು ಕಡಿಮೆ ವೇತನಕ್ಕೆ ದುಡಿಯುತ್ತಿರುವುದರಿಂದ ಅವರು ತಮ್ಮ ಕುಟುಂಬದ ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ ಆದ್ದರಿಂದ ಅವರ ಮಾಸಿಕ ವೇತನವನ್ನು 15, ಸಾವಿರಕ್ಕೆ ಸಿಗದಿ ಪಡಿಸಬೇಕಾಗಿದೆ. ಕಾರ್ಮಿಕ ಮಂಡಳಿಯಲ್ಲಿ ಕಾರ್ಮಿಕರ ಸದಸ್ಯತ್ವಕ್ಕೆ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಮನೆ ನಿವೇಶನ ನೀಡಬೇಕು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಛೇರಿಯನ್ನು ಮೂಡುಬಿದಿರೆಯಲ್ಲಿ ತೆರೆಯಬೇಕು, 2015-16ರ ಸಾಲಿನ ತುಟ್ಟಿಭತ್ಯೆಯನ್ನು ಬೀಡಿ ಕಾರ್ಮಿಕರಿಗೆ ನೀಡುವಲ್ಲಿ ಬೀಡಿ ಮಾಲೀಕರಿಗೆ ವಿನಾಯಿತಿ ನೀಡಿರುವುದು ಸರಿಯಲ್ಲ ಆದ್ದರಿಂದ ಕೂಡಲೇ ಪುನರ್ ಪರಿಶೀಲಿಸಿ 2015-16ರ ತುಟ್ಟಿ ಭತ್ತೆಯನ್ನು ಕಾರ್ಮಿಕರಿಗೆ ವಿತರಿಸಬೇಕು, ಗುತ್ತಿಗೆ ಕಾರ್ಮಿಕ ಪದ್ಧತಿಗಳನ್ನು ನಿಷೇಧಿಸಬೇಕು. ಅಂಗನವಾಡಿ, ಬಿಸಿಯೂಟ ಆಶಾ ನೌಕರರ ಮಾಸಿಕ ವೇತನವನ್ನು ಏರಿಕೆ ಮಾಡಬೇಕು ಸಹಿತ ಒಟ್ಟು 13ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರಿಗೆ ಮನವಿ ಸಲ್ಲಿಸಿದರು.
ಸಿ.ಐ.ಟಿ.ಯು ವಲಯದ ಅಧ್ಯಕ್ಷ ಶಂಕರ, ಕಾರ್ಯದರ್ಶಿ ರಾಧ, ಹಮಾಲಿ ಕಾರ್ಮಿಕರ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ, ಕಟ್ಟಡ ಕಾರ್ಮಿಕ ವಲಯದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕ್ಯಾಶ್ಯೂ ಮುಖಂಡೆ ಯಶೋಧ, ಸಿಐಟಿಯು ಮುಖಂಡೆ ಲಕ್ಷ್ಮೀ, ಬೀಡಿ ಸಂಘಟನೆ, ಬಿಸಿಯೂಟ ಸಂಘಟನೆಯ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
