ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಮತ್ತು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ನೆಲ್ಲಿಕಾರು ಇದರ ಆಶ್ರಯದಲ್ಲಿ ನೆಲ್ಲಿಕಾರು ಅನಂತನಾಥ ಬಸದಿ ಸಭಾಭವನದಲ್ಲಿ ಜರಗಿದ 892ನೇ ಮದ್ಯವರ್ಜನ ಶಿಬಿರ ಸಮಾರೋಪಗೊಂಡಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಿ, ಮದ್ಯಪಾನದಂತಹ ಚಟ ಅಂಟಿಸಿಕೊಂಡವರಿಗೆ ಭವಿಷ್ಯದ ಚಿಂತನೆಯಾಗಲೀ, ಭವಿಷ್ಯದ ಕಲ್ಪನೆಯಾಗಲೀ ಇರುವುದಿಲ್ಲ. ಮದ್ಯಪಾನದ ಭೂತ ಶರೀರವನ್ನು ಬಿಟ್ಟು ಹೋದ ನಂತರ ಅದರ ದಾಸರಾಗಿದ್ದವರು ತಮ್ಮನ್ನೇ ಕಂಡು ತಾವು ಮರುಕ ಪಡುತ್ತಾರೆ. ಮದ್ಯಪಾನ ಚಟದಿಂದ ಮುಕ್ತರಾಗಲು ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳುವುದು ಪುಣ್ಯದ ಕೆಲಸ. ಚಟಮುಕ್ತ ಜೀವನದಿಂದ ಭವಿಷ್ಯದ ಕಲ್ಪನೆ, ಚಿಂತನೆ ಸಾಧ್ಯ ಎಂದರು.

ವೈದ್ಯ ಡಾ.ಶೀತಲ್ ಕುಮಾರ್ ನೆಲ್ಲಿಕಾರು, ನೆಲ್ಲಿಕಾರು ಅನಂತನಾಥ ಬಸದಿ ಆಡಳಿತ ಮೊಕ್ತೇಸರ ಪಣಪಿಲ ಅರಮನೆ ಶ್ರೀ ವರ್ಮ ಶೆಟ್ಟಿ, ಹರಿಶ್ಚಂದ್ರ ತೆಂಡುಲ್ಕರ್ ಮಾಳ, ಕೇಂದ್ರೀಯ ಸಮಿತಿ ಅಧ್ಯಕ್ಷ ಪಾಂಡು ಮುಂಡ್ಕೂರ ಉಪಸ್ಥಿತರಿದ್ದರು, ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಮಾಜಿ ಸದಸ್ಯ ಶೇಣಿಕ್ರಾಜ್ ಮತ್ತಿತರರು ಉಪಸ್ಥಿತರಿದ್ದರು.
ನೆಲ್ಲಿಕಾರು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಶಿಬಿರಾಧಿಕಾರಿ ಗಣೇಶ್ ಆಚಾರ್ಯ ಶಿಬಿರದ ವರದಿ ಓದಿದರು. ನೆಲ್ಲಿಕಾರಿನ ಪುರೋಹಿತ ದಾಮೋದರ ಶರ್ಮ ನಿರೂಪಿಸಿದರು. ಶಿಬಿರಾರ್ಥಿಗಳ ಪರವಾಗಿ ಸುಭಾಸ್ ಹೆಗ್ಡೆ ಮತ್ತು ಇಕ್ಬಾಲ್ ತಮ್ಮ ಅನಿಸಿಕೆಗಳನ್ನು ಹೇಳಿದರು.
ಸಂಪತ್ ಜೈನ್ ಸಂಪಾದಕತ್ವದ ಮದ್ಯವರ್ಜನ ಶಿಬಿರಾರ್ಥಿಗಳ ಯಶೋಗಾಥೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಕಾರ್ಕಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹೊಸ್ಮಾರು ವಲಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
