ಬಂಟ್ವಾಳ: ಜಿಲ್ಲೆಯಲ್ಲಿ ಈ ಬಾರಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ ಪಡೆದು ಬಂಟ್ವಾಳ-ಮಂಗಳೂರು ಮಧ್ಯೆ ಬೆಂಜನಪದವಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಅವಕಾಶ ವಂಚಿತ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಸಹಿತ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಪ್ರತಿಭಾನ್ವಿತ ಸುಮಾರು 15ಸಾವಿರಕ್ಕೂ ಮಿಕ್ಕಿ ಮಂದಿ ಉದ್ಯೋಗಾಕಾಂಕ್ಷಿಗಳ ಪೈಕಿ ಒಟ್ಟು 3ಸಾವಿರಕ್ಕೂ ಮಿಕ್ಕಿ ಮಂದಿಗೆ ಉದ್ಯೋಗ ನೀಡಿದ ಸಂತೃಪ್ತಿ ದೊರೆತಿದೆ ಎಂದು ಉದ್ಯೋಗ ಮೇಳದ ರೂವಾರಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ತಾಲ್ಲೂಕಿನ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶುಕ್ರವಾರ ಸಮಾರೋಪಗೊಂಡ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಕಂಪೆನಿ ಪ್ರತಿನಿಧಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿ ಅವರು ಮಾತನಾಡಿದರು.
ಇಲ್ಲಿನ ಉದ್ಯೋಗ ಮೇಳದಲ್ಲಿ ದೇಶೀಯ ಮಾತ್ರವಲ್ಲದೆ ವಿದೇಶಿ ಕಂಪೆನಿಗಳು ಕೂಡಾ ಆಗಮಿಸಿ ಗೌರವ ಹೆಚ್ಚಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ತಮಿಳ್ನಾಡಿನಿಂದಲೂ ಅಭ್ಯರ್ಥಿಗಳು ಧಾವಿಸಿದ್ದು, ಗದಗ ಜಿಲ್ಲೆ ಅಭ್ಯರ್ಥಿಯೊಬ್ಬರು ಭೇಟಿ ಮಾಡಿ ಉಚಿತ ಉದ್ಯೋಗ ನೀಡಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಎಂಟು ವೈದ್ಯಕೀಯ, 18 ಎಂಜಿನಿಯರಿಂಗ್, 200 ಪದವಿ ಕಾಲೇಜುಗಳಿದ್ದು, ವಾರ್ಷಿಕ ಸುಮಾರು 1ಲಕ್ಷಕ್ಕೂ ಮಿಕ್ಕಿ ಪದವೀಧರರನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡ ನಮಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗದಿದ್ದರೆ ಯುವಜನರನ್ನು ಕೆಲವೊಂದು ಸಮೂಹವು ತಪ್ಪು ದಾರಿಗೆ ಎಳೆಯಲು ಸಾಧ್ಯವಿದೆ ಎಂದು ಅವರು ಭೀತಿ ವ್ಯಕ್ತಪಡಿಸಿದರು. ಇದಕ್ಕಾಗಿ ಪ್ರತೀ ವರ್ಷ ಉದ್ಯೋಗ ಮೇಳ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಅವರು ತಿಳಿಸಿದರು.
ಇಲ್ಲಿನ ಉದ್ಯೋಗ ಮೇಳ ಯಶಸ್ವಿಯಾಗಲು ವಿವಿಧ ಕಂಪೆನಿ ಮುಖ್ಯಸ್ಥರ ಜೊತೆಗೆ ಸಮಾಜಮುಖಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸಂಪೂರ್ಣ ತೊಡಗಿಸಿಕೊಂಡಿದೆ. ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಇಲ್ಲಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸಹಕಾರ ಮತ್ತು ಪ್ರೋತ್ಸಾಹದ ಜೊತೆಗೆ ಪೊಲೀಸ್ ಇಲಾಖೆಯಿಂದ ರಕ್ಷಣೆ ದೊರೆತಿದೆ. ಸಕರ್ಾರದ ಉದ್ಯೋಗ ಮತ್ತು ತರಭೇತಿ ಸಂಸ್ಥೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ದೊರೆತಿದೆ. ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇಲ್ಲಿನ ಪರಿಸರವೂ ಶುಚಿಯಾಗಿದೆ. ಒಟ್ಟಿನಲ್ಲಿ ಕೆನರಾ ಬ್ಯಾಂಕಿನ ಸ್ಥಾಪಕ ದಿವಂಗತ ಅಮ್ಮೆಂಬಳ ಸುಬ್ಬರಾಯ ಪೈ ಅವರ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಹೆಸರು ದೇಶ ವಿದೇಶದಲ್ಲಿ ಗುರುತಿಸುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಾರಿತ್ರಿಕ ಸಾಧನೆ: ಸೊರಕೆ
ಸಚಿವ ರೈ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಉದ್ಯೋಗ ಮೇಳವು ಶಿಸ್ತು ಮತ್ತು ಅಚ್ಚುಕಟ್ಟಿನಿಂದ ಯಶಸ್ವಿಯಾಗಿ ನಡೆದು ರಾಜ್ಯದಲ್ಲೇ ಚಾರಿತ್ರಿಕ ಸಾಧನೆ ಮಾಡಿದೆ. ಇದರಿಂದಾಗಿ ಉಡುಪಿ ಜಿಲ್ಲೆಯಲ್ಲಿಯೂ ಇಂತಹ ಉದ್ಯೋಗ ಮೇಳ ಆಯೋಜಿಸಲು ನಮಗೆ ಪ್ರೇರಣೆ ದೊರೆತಿದೆ ಎಂದರು.
ಇದೇ ವೇಳೆ ಉದ್ಯೋಗ ಮೇಳದಲ್ಲಿ ಪಾಲ್ಗೊಂಡ 300ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಸಚಿವರು ಗೌರವಿಸಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಸಹಾಯಕ ಆಯುಕ್ತ ಡಾ.ಅಶೋಕ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಉಪ ಕಾರ್ಯದರ್ಶಿ ಆರ್.ಉಮೇಶ್, ತಹಶೀಲ್ದಾರ್ ಪುರಂದರ ಹೆಗ್ಡೆ, ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಮಮತಾ ಎಸ್.ಗಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ವಾರ್ತಾಧಿಕಾರಿ ಖಾದರ್ ಷಾ, ಬಿ.ಎಚ್.ಖಾದರ್, ಡಾ.ಯು.ಟಿ.ಇಫ್ತಿಕರ್ ಮತ್ತಿತರರು ಇದ್ದರು.
ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಸ್ವಾಗತಿಸಿ, ವಂದಿಸಿದರು. ಸಮಿತಿ ಸಂಯೋಜಕ ಮಿಜಾರುಗುತ್ತು ವಿವೇಕ್ ಆಳ್ವ ಕಂಪೆನಿ ಮುಖ್ಯಸ್ಥರನ್ನು ಪರಿಚಯಿಸಿದರು.
