ಉಳ್ಳಾಲ: ವಿಚಾರಣೆಗೆಂದು ಕರೆದ ಪೊಲೀಸರನ್ನು ಕಂಡು ಸಮುದ್ರದಲ್ಲಿ ಈಜಿ ಪರಾರಿಯಾಗಲು ಯತ್ನಿಸುತ್ತಿದ್ದ ಮೂರು ಮಂದಿಯ ತಂಡಕ್ಕೆ ದೋಣಿಯಲ್ಲಿ ಇದ್ದ ದುಷ್ಕರ್ಮಿಗಳು ದೊಣ್ಣೆಯಿಂದ ತಲೆಗೆ ಬಡಿದು ಸಮುದ್ರದಲ್ಲೇ ಹಲ್ಲೆ ನಡೆಸಿರುವ ಘಟನೆ ಮೊಗವೀರಪಟ್ನದ ಸಮುದ್ರತೀರದಿಂದ 100 ನಾಟಿಕಲ್ ಮೈಲು ದೂರದಲ್ಲಿ ಶನಿವಾರ ಸಂಜೆ ಸಂಭವಿಸಿದ್ದು, ಘಟನೆಯಿಂದಾಗಿ ಮೊಗವೀರಪಟ್ನದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.

ಉಳ್ಳಾಲಬೈಲು ನಿವಾಸಿ ಇಕ್ಬಾಲ್ ಎಂಬವರಿಗೆ ತಂಡವೊಂದು ಕೋಟೆಪುರ ಡೀರೋಡ್ ಬಳಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಉಪನಿರೀಕ್ಷಕಿ ಭಾರತಿ ಅವರ ತಂಡ ಆರೋಪಿಗಳ ಹುಡುಕಾಟದಲ್ಲಿ ನಿರತವಾಗಿತ್ತು. ಈ ಸಂದರ್ಭ ಮೊಗವೀರಪಟ್ನದತ್ತ ತೆರಳಿದ್ದ ಎಸ್.ಐ ಭಾರತಿ ನೇತೃತ್ವದ ಪೊಲೀಸರ ತಂಡ ಮೀನುಗಾರಿಕೆಯಿಂದ ವಾಪಸ್ಸಾಗಿ ಊಟ ಮುಗಿಸಿ ಮೊಗವೀರಪಟ್ನ ಬಳಿ ಸಮುದ್ರ ತೀರದಲ್ಲಿ ಕುಳಿತಿದ್ದ ಐದು ಮಂದಿಯನ್ನು ವಿಚಾರಣೆಗೆಂದು ಕರೆದಿದ್ದರು. ಇದರಿಂದ ಗಾಬರಿಗೊಂಡ ಐದು ಮಂದಿ ಯುವಕರು ಸಮುದ್ರಕ್ಕೆ ಜಿಗಿದು ಈಜುತ್ತಲೇ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ.
ದೊಣ್ಣೆಯಿಂದ ಹೊಡೆದರು: ಈಜುತ್ತಾ 100 ನಾಟಿಕಲ್ ಮೈಲು ದೂರ ಕ್ರಮಿಸಿದ್ದ ಮೂರು ಮಂದಿ ಯುವಕರನ್ನು ಸುತ್ತುವರಿದ ದೋಣಿಯಲ್ಲಿದ್ದ ತಂಡವೊಂದು ಅದಾಗಲೇ ದೋಣಿಯಲ್ಲಿ ಇರಿಸಿದ್ದ ಮರದ ದೊಣ್ಣೆಯಿಂದ ಮೂವರಿಗೆ ದೊಣ್ಣೆಯಲ್ಲಿ ತಲೆಗೆ ಹೊಡೆದಿದ್ದಾರೆ. ಗಾಯಗೊಂಡು ಸಮುದ್ರದಲ್ಲೇ ಬೊಬ್ಬೆ ಹಾಕಲು ಶುರು ಮಾಡಿದ ಯುವಕರನ್ನು ಕಂಡ ಮೊಗವೀರರು ಮೂವರನ್ನು ನೀರಿನಿಂದ ದಡಕ್ಕೆ ತಂದು ರಕ್ಷಿಸಿದ್ದಾರೆ.
ದೋಣಿಯಲ್ಲಿದ್ದವರು ವಶಕ್ಕೆ : ದೋಣಿಯಲ್ಲಿ ಹಲ್ಲೆ ನಡೆಸಿ ಪರಾರಿಯಾದವರನ್ನು ಕೋಸ್ಟ್ ಗಾರ್ಡ್ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಎಲ್ಲರೂ ಕುದ್ರೋಳಿ ಮೂಲದವರೆಂದು ತಿಳಿದುಬಂದಿದ್ದು, ಪೂರ್ವನಿಯೋಜಿತವಾಗಿ ಕೃತ್ಯ ನಡೆಸಲು ಬಂದಿದ್ದವರು ಯುವಕರಿಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಘಟನೆಯನ್ನು ಖಂಡಿಸಿ ಮೊಗವೀರಪಟ್ನದ ನಿವಾಸಿಗಳು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಬಾರಿಯೂ ಪೊಲೀಸರು ಮೊಗವೀರಪಟ್ನದಲ್ಲಿ ದಾಳಿ ನಡೆಸಿ ಅಮಾಯಕರನ್ನು ಬಂಧಿಸುತ್ತಿದ್ದಾರೆ. ಇದರಿಂದ ಮೀನುಗಾರಿಕೆಯನ್ನು ನಂಬಿ ಬದುಕುತ್ತಿರುವ ಕುಟುಂಬಗಳು ಕಂಗಾಲಾಗುತ್ತಿವೆ. ಇಂತಹ ಪೊಲೀಸರ ವರ್ತನೆಯಿಂದ ಬೆದರಿ ಯುವಕರು ಸಮುದ್ರಕ್ಕೆ ಹಾರಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲಿ ಆದರೆ ವಿಚಾರಣೆ ನೆಪದಲ್ಲಿ ಅಮಾಯಕರನ್ನು ಕೊಂಡೊಯ್ದು ಬಂಧಿಸುವುದು ಸಮಂಜಸವಲ್ಲ ಎಂದು ಮೊಗವೀರಪಟ್ನ ನಿವಾಸಿಗಳು ಆರೋಪಿಸಿದ್ದಾರೆ.









