ಬಂಟ್ವಾಳ : ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ಸ್ಥಳೀಯ ನಿವಾಸಿ ಹರೀಶ್ ಹತ್ಯೆ ಹಾಗೂ ಶಮೀವುಲ್ಲಾ ಅವರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎಸ್ಪಿ ನೇತೃತ್ವದ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.

ಗುರುವಾರ ಬಿ.ಸಿ.ರೋಡು ಹಾಗೂ ಮಣಿಹಳ್ಳದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಐಜಿ ಅಮೃತ್‍ಪಾಲ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. ಈ ಕೃತ್ಯಕ್ಕೆ ಸಂಬಂಧಿಸಿ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಐಆರ್‍ಬಿ, ಕೆಎಸ್‍ಆರ್‍ಪಿ ಸಹಿತ 1500 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಿಷೇಧಾಜ್ಞೆಯನ್ನು ಮೂರು ದಿನಗಳವರೆಗೆ ಜಾರಿಗೊಳಿಸಲಾಗಿದ್ದರೂ, ಪರಿಸ್ಥಿತಿ ಅವಲೋಕಿಸಿ ಜಿಲ್ಲಾಧಿಕಾರಿಯವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಸಿ.ಐ ಬೆಳ್ಳಿಯಪ್ಪ, ತಹಶೀಲ್ದಾರ್ ಪುರಂದರ ಹೆಗ್ಡೆ ಯವರು ಉಪಸ್ಥಿತರಿದ್ದರು. ಬಳಿಕ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ನಡೆದ ಅಹಿತಕರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಕಲ್ಲೆಸೆತ ಹಲವರು ವಶಕ್ಕೆ; ಕಲ್ಲಡ್ಕ , ತುಂಬೆ, ಕೈಕಂಬ ಮೊದಲಾದೆಡೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

