ಮಂಗಳೂರು : ಸರ್..ಮಕ್ಕಳು ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತೆ..? ಎಲ್ಲಾ ಮಕ್ಳು ಖುಷಿಯಲ್ಲಿರಬೇಕಾದ್ರೆ.. ನಾವೇನು ಮಾಡ್ಬೇಕು ಹೇಳಿ ಸಾರ್.. ಎನ್ನುವ ಮಕ್ಕಳ ಪ್ರಶ್ನೆಗಳಿಗೆ ವೇದಿಕೆ ಒದಗಿಸಿತ್ತು ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ. ನ.5 ಮತ್ತು 6 ರಂದು ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ, ಮಕ್ಕಳ ಹಕ್ಕುಗಳ ಸಂಘದ ವೇದಿಕೆ ಹಾಗೂ ಬೆಂಗಳೂರಿನ ಚೈಲ್ಡ್ ರೈಟ್ಸ್ ಕ್ಲಬ್ ನ ಆಶ್ರಯದಲ್ಲಿ ಆಯೋಜಿಸಲಾದ “ಮಕ್ಕಳ ಹಕ್ಕುಗಳ ಕುರಿತಾದ ತರಬೇತಿ ಕಾರ್ಯಾಗಾರ” ಪರಿಣಾಮಕಾರಿಯಾಗಿ ಮೂಡಿ ಬಂದಿದ್ದು, ಮುಖ್ಯಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು, ಮಕ್ಕಳ ಹಕ್ಕುಗಳ ಕುರಿತಾಗಿ ಮಕ್ಕಳಿಗೆ ತಿಳಿ ಹೇಳಿದರು. ಸಾಮಾಜಿಕವಾಗಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು , ಹಕ್ಕುಗಳ ಉಲ್ಲಂಘನೆಯನ್ನು ಗುರುತಿಸುವ ಕುರಿತಾಗಿ ಗುಂಪು ಚರ್ಚೆಯನ್ನು ನಡೆಸಿಕೊಟ್ಟರು. ಮಕ್ಕಳು ವಿವಿಧ ಚಟುವಟಿಕೆ,ಆಟಗಳ ಮೂಲಕ ಮಕ್ಕಳು ಸಾಮಾಜಿಕವಾಗಿ ವಹಿಸಬೇಕಾದ ಎಚ್ಚರಗಳನ್ನು, ಹಾಗೂ ಮಕ್ಕಳ ಹಕ್ಕುಗಳ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿದರು.

ಶಾಲೆ-ಮನೆ,ಸಮುದಾಯದಲ್ಲಿ ಸಂಕಷ್ಟ..
ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಮಕ್ಕಳು. ಶಾಲೆಗಳಲ್ಲಿ.ಮನೆಗಳಲ್ಲಿ ಹಾಗೂ ಸಮುದಾಯದ ನಡುವೆ ಸಂಕಷ್ಟ ಅನುಭವಿಸುತ್ತಿರುವ ಸಂಕಟಗಳನ್ನು ಮಕ್ಕಳೇ ತೆರೆದಿಟ್ಟದ್ದು ವಿಶೇಷವಾಗಿತ್ತು. ಶಿಕ್ಷಣದ ಉದ್ದೇಶದಿಂದ ಶಾಲೆಗೆ ಬರುವ ಮಕ್ಕಳು ಕಲಿಕಾ ಸಂದರ್ಭದಲ್ಲಿ, ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಎದುರಿಸುವ ತಾರತಮ್ಯಗಳು ಶಾಲೆಯಲ್ಲಿ ಬೊಟ್ಟು ಮಾಡಿದ್ದರೆ , ಮನೆಗಳಲ್ಲಿ ಬಡತನದ ಕಾರಣದಿಂದ ,ಟ್ಯೂಷನ್, ಹೋಮ್ ವರ್ಕ್ಗಳು, ಅಪ್ಪ ಅಮ್ಮನ ಜಗಳ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎಂದ ಉಲ್ಲೇಖವಿತ್ತು. ಚುಡಾವಣೆ ಯಿಂದ ತೊಡಗಿ ಅಪಹರಣ, ಅತ್ಯಾಚಾರಗಳಂತಹ ಗಂಭೀರ ಸಮಸ್ಯೆಗಳು ಮಕ್ಕಳ ಬದುಕಿನ ಹಕ್ಕಿಗೆ ಕೊಲ್ಲಿ ಇಡುತ್ತಿದೆ ಎನ್ನುವ ಆತಂಕಗಳನ್ನೂ ಮಕ್ಕಳು ವ್ಯಕತಪಡಿಸಿದರು. ಮಕ್ಕಳ ಹಕ್ಕು ಎಂದರೇನು ಎನ್ನುತ್ತಲೇ ಮಾತು ಆರಂಭಿಸಿದ ಸಂಪನ್ಮೂಲ ವ್ಯಕ್ತಿ ನಾಗಸಿಂಹ ಜಿ.ರಾವ್ ಅವರು, ಮಕ್ಕಳ ಮೂಲಭೂತ ಅವಶ್ಯಕತೆಗಳೇ ಮಕ್ಕಳ ಹಕ್ಕುಗಳು. ಅದನ್ನು ಒದಗಿಸಿಕೊಡುವುದು ಸರ್ಕಾರದ ಜವಬ್ದಾರಿಯಾಗಿದೆ ಎಂದರು. ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂಘ ರಚನೆಯಾಗಬೇಕು, ಮಕ್ಕಳ ಹಕ್ಕುಗಳಿಗೆ ಚ್ಯುತಿಬರಬಾರದು ಎನ್ನುವ ಸೂಚನೆಗಳಿದ್ದರೂ ಶಾಲಾ ಹಂತದಲ್ಲಿ ಅದರ ಪರಿಪೂರ್ಣ ಪಾಲನೆಯಾಗುತ್ತಿಲ್ಲ, ಈ ನಿಟ್ಟಿನಲ್ಲಿ ಸಮುದಾಯದ ಪಾತ್ರ ಮಹತ್ತರವಾದುದಾಗಿದ್ದು, ಸಮುದಾಯವನ್ನು ಮಕ್ಕಳ ವಿಚಾರದಲ್ಲಿ ಜಾಗೃತಗೊಳಿಸುವ ಕಾರ್ಯ ಮಕ್ಕಳ ಹಕ್ಕುಗಳ ಸಂಘಗಳಿಂದ ನಡೆಯಲಿ ಎಂದವರು ಆಶಯ ವ್ಯಕ್ತಪಡಿಸಿದರು.
ಮಕ್ಕಳೇ ಪಟ್ಟಿ ಮಾಡಿದ ಸಮಸ್ಯೆಗಳನ್ನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಕಲ್ಯಾಣಸಮಿತಿ ಅಧ್ಯಕ್ಷ ರಾದ ವಿಖೇಶ್ ಶೆಟ್ಟಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಜೇಮ್ಸ್ ಕುಟಿನ್ಹಾ ರವರ ಮುಂದೆ ಪ್ರಸ್ತಾಪಿಸಲಾಯಿತು. ಪಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಸದಾಶಯದ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕಿ ಮೌನೇಶ ವಿಶ್ವಕರ್ಮ ಪ್ರಸ್ತಾಪಿಸಿದರು. ಕಾರ್ಯಕ್ರಮ ಸಂಯೋಜಕ ವಿಲಿಯಂ ಸ್ಯಾಮುವೆಲ್ ಸ್ವಾಗತಿಸಿ, ನಿರೂಪಿಸಿದರು. ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ 25 ಶಾಲೆಗಳ ಮಕ್ಕಳ ಹಕ್ಕು ಸಂಘದ ಪ್ರತಿನಿಧಿಗಳು, ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.












