ನರಿಕೊಂಬು-ಶಂಭೂರು ಕುಡಿಯುವ ನೀರಿಗೆ ರೂ 19ಕೋಟಿ :ಸಚಿವ ರೈ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಒಟ್ಟು ಆರು ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಪೈಕಿ ಇಲ್ಲಿನ ನೇತ್ರಾವತಿ ನದಿಯಿಂದ ನರಿಕೊಂಬು ಮತ್ತು ಶಂಭೂರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ರೂ 19ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ನರಿಕೊಂಬು ಗ್ರಾಮದ ನಿನ್ನಿಪಡ್ಪು-ನಾರಿಕೊಂಬೇಶ್ವರ ದೇವಸ್ಥಾನ ರಸ್ತೆಗೆ ರೂ 10ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕರಣ ಕಾಮಗಾರಿಯನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
9btl-Narikombeshwarಈ ಹಿಂದೆ ರೂ 10ಲಕ್ಷ ವೆಚ್ಚದಲ್ಲಿ ರಸ್ತೆಯ ಒಂದು ಭಾಗ ಕಾಂಕ್ರಿಟೀಕರಣಗೊಂಡಿದ್ದು, ಮತ್ತೆ ರೂ 10ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಂದುವರಿಸುವ ಮೂಲಕ ಒಟ್ಟು ರೂ 30ಲಕ್ಷ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ರೂ 25ಲಕ್ಷ ವೆಚ್ಚದಲ್ಲಿ ನೆಹರೂನಗರ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು, ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ರೂ 32ಲಕ್ಷ ವೆಚ್ಚದಲ್ಲಿ ಸ್ಥಳೀಯ ಕರ್ಬೆಟ್ಟು-ಮೊಗರ್ನಾಡು ರಸ್ತೆ, ರೂ 72ಲಕ್ಷ ವೆಚ್ಚದಲ್ಲಿ ಮರ್ದೋಳಿ-ನಾಯಿಲ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊಂಡಿದೆ. ಕೆಡಿಪಿ ಸದಸ್ಯ ಉಮೇಶ ಬೋಳಂತೂರು ನೇತೃತ್ವದ ನಿಯೋಗವು ನೀಡಿದ ಮನವಿಯಂತೆ ಈಗಾಗಲೇ ಪಾಣೆಮಂಗಳೂರು ಸತ್ಯಶ್ರೀ ಗುಡಿ ತೆರವು ಸ್ಥಗಿತಗೊಳಿಸುವಲ್ಲಿ ಕೇಂದ್ರದ ಭೂಸಾರಿಗೆ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಮೂಲಕ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಮಮತಾ ಎಸ್.ಗಟ್ಟಿ, ಚಂದ್ರಪ್ರಾಶ ಶೆಟ್ಟಿ, ಎಂ.ಎಸ್.ಮಹಮ್ಮದ್‍ರಂತಹ ಸಮರ್ಥ ಜಿಲ್ಲಾ ಪಂಚಾಯಿತಿ ಸದಸ್ಯರು ಆಯ್ಕೆಗೊಂಡಾಗ ಮಾತ್ರ ಕ್ಷೇತ್ರದಲ್ಲಿ ನನಗೆ ಮತ್ತಷ್ಟು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಎಸ್.ಗಟ್ಟಿ, ಚಂದ್ರಪ್ರಕಾಶ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಆಲಿ, ಪ್ರಗತಿಪರ ಕೃಷಿಕ ರಾಯಸ ಶ್ರೀನಿವಾಸ ಪೂಜಾರಿ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ನಾಟಿ ಶ್ರೀ ಕೋದಂಡರಾಮ ದೇವಸ್ಥಾನ ರಸ್ತೆ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ದೇವಳದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಎನ್.ಪರುಷೋತ್ತಮ ಬಂಗೇರ ನೇತೃತ್ವದಲ್ಲಿ ಸ್ಥಳೀಯರು ಸಚಿವರಿಗೆ ಮನವಿ ಸಲ್ಲಿಸಿದರು. ಸ್ಥಳೀಯ ವಿಕಲ ಚೇತನ ಹರ್ಷಿತ ಕಲ್ಯಾರು ಎಂಬವರಿಗೆ ಜಿಲ್ಲಾ ಪಂಚಾಯಿತಿನಿಂದ ಮಂಜೂರಾದ ರೂ 50ಸಾವಿರ ಮೊತ್ತದ ಪರಿಹಾರಧನ ಚೆಕ್ಕನ್ನು ಸಚಿವರು ವಿತರಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆಲ್ಫೋನ್ಸ್ ಮಿನೇಜಸ್, ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಎನ್.ಪ್ರಕಾಶ ಕಾರಂತ, ಆರಾಧನಾ ಸಮಿತಿ ಅಧ್ಯಕ್ಷ ಚಂದ್ರಶೇಖರ, ಪ್ರಮುಖರಾದ ಆಲ್ಬರ್ಟ್ ಮಿನೇಜಸ್, ಪಿ.ಎಸ್.ಅಬ್ದುಲ್ ಹಮೀದ್, ಕೃಷ್ಣಪ್ಪ ಪೂಜಾರಿ ನಾಟಿ, ಜಿನರಾಜ ಕೋಟ್ಯಾನ್, ರಮೇಶ ಬೋರುಗುಡ್ಡೆ, ಭರತ್‍ರಾಜ್, ಸುಂದರ ಏಲಬೆ, ದಿವಾಕರ ಮತ್ತಿತರರು ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್ ವಂದಿಸಿದರು.

ಪಾಣೆಮಂಗಳೂರು ಪೇಟೆಯಲ್ಲಿ ನಿರ್ಮಾಣಗೊಂಡ ನೂತನ ಮೀನು ಮಾರುಕಟ್ಟೆ ಪ್ರಾಂಗಣದ ಉದ್ಘಾಟನೆ ಇದೇ 15ರಂದು ನಡೆಯಲಿದ್ದು, ಇಲ್ಲಿನ ನಾಗರಿಕರಿಗೆ ಅನುಕೂಲವಾಗಲಿದೆ. ಬಂಟ್ವಾಳ ತಾಲ್ಲೂಕಿನ ಬೆಂಜನಪದವಿನಲ್ಲಿ ಇದೇ 19ರಿಂದ 20ರತನಕ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಈ ಬಾರಿ ಒಟ್ಟು 130ಕ್ಕೂ ಮಿಕ್ಕಿ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 3ಸಾವಿರಕ್ಕೂ ಮಿಕ್ಕಿ ಮಂದಿಗೆ ಉದ್ಯೋಗ ಲಭಿಸಲಿದೆ. ಇದರಿಂದಾಗಿ ಬಂಟ್ವಾಳ ತಾಲ್ಲೂಕಿನಲ್ಲಿ ಪ್ರತೀ ವರ್ಷ ಉದ್ಯೋಗ ಮೇಳ ಆಯೋಜಿಸುವುದಾಗಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

By suddi9

Leave a Reply

Your email address will not be published. Required fields are marked *