ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 1991ರಲ್ಲಿ ಸ್ಥಾಪನೆಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ) ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಐತಿಹಾಸಿಕ ಹಿನ್ನಲೆಯ 205 ಪುರಾತನ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದೆ. ಹಾಗೂ ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯ ಸಹಭಾಗಿತ್ವದೊಂದಿಗೆ ಈ ತನಕ 142 ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳಲಾಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ)ನ ಕಾರ್ಯಚಟುವಟಿಕೆಗೆ ಕರ್ನಾಟಕ ಸರ್ಕಾರವು ಪ್ರೋತ್ಸಾಹಿಸುತ್ತಿರುವುದು ಮಾತ್ರವಲ್ಲದೆ, ಖಾಸಗಿ ಸಂಸ್ಥೆಯಾದ ಜಿಂದಾಲ್ ತನ್ನ ಜೆ.ಎಸ್.ಡಬ್ಲೂ ಪ್ರತಿಷ್ಠಾನದ ಸಹಭಾಗಿತ್ವದೊಂದಿಗೆ ವಿಶ್ವಪರಂಪರೆ ಕ್ಷೇತ್ರವಾದ ಹಂಪಿ ವ್ಯಾಪ್ತಿಯಲ್ಲಿರುವ ಕ್ರಿ.ಶ.1450ರ ಶ್ರೀ ಸೌಮ್ಯ ಸೋಮೇಶ್ವರ ದೇವಸ್ಥಾನದ ಸಂರಕ್ಷಣಾ ಕಾರ್ಯದ ಒಡಂಬಡಿಕಾ ಪತ್ರಕ್ಕೆ ನ.03 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಹಿ ಮಾಡಲಾಯಿತು.
ಧರ್ಮೋತ್ಥಾನ ಟ್ರಸ್ಟಿನ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಜಿಂದಾಲ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಸಿ.ಎಸ್.ಕೇದಾರ್ ಮತ್ತು ಆಡಳಿತ ವಿಭಾಗದ ಅಧಿಕಾರಿ ಡಾ|| ವಿಶ್ವನಾಥ ಪಾಲೇಡ್ ಹಾಗೂ ಧರ್ಮೋತ್ಥಾನ ಟ್ರಸ್ಟಿನ ನಿರ್ದೇಶಕ ಶ್ರೀ ಎ.ಹೆಚ್.ಹರಿರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಶ್ರೀ ಎ.ವಿ.ಶೆಟ್ಟಿ ಇವರು ಒಪ್ಪಂದಕ್ಕೆ ಸಹಿ ಹಾಕಿದರು.
