ದೆಹಲಿ: ಕೆಲವು ತಾಂತ್ರಿಕ ದೋಷದ ಕಾರಣದಿಂದಾಗಿ ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳ ಹನ್ನೆರಡು ಮತಗಟ್ಟೆಗಳಲ್ಲಿ ಏ. 29ರಂದು ನಡೆಯಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಝಾ, ಕಳೆದ ದಿನಾಂಕ 17ರಂದು ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಒಂದು ಮತಗಟ್ಟೆಯಲ್ಲಿ ಚುನಾವಣಾಧಿಕಾರಿಯೇ ನಕಲಿ ಮತದಾನ ಮಾಡಿದ್ದರೆ, ಉಳಿದ ಹನ್ನೊಂದು ಮತಗಟ್ಟೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದನ್ವಯ ಏ. 29ರಂದು ಎಲ್ಲ 12 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ ಎಂದರು.
ತುಮಕೂರ ಜಿಲ್ಲೆ ತುರುವೆಕೆರೆಯ ಕೋಲಗಟ್ಟದಲ್ಲಿ ಚುನಾವಣಾ ಸಿಬ್ಬಂದಿಯೇ ಅಕ್ರಮವಾಗಿ ಮತದಾನ ಮಾಡಿದ್ದರು ಎಂಬ ಹಿನ್ನೆಲೆಯಲ್ಲಿ ಮರು ಮತದಾನ ನಡೆಯುತ್ತಿದ್ದು, ಅವರ ಕರ್ತವ್ಯಲೋಪದ ಕುರಿತು ತನಿಖೆ ನಡೆಯುತ್ತಿದೆ. ಉಳಿದಂತೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ವಿವಿಧ ರಾಜಕೀಯ ಪಕ್ಷಗಳು ಈ ಕುರಿತು ದೂರು ನೀಡಿದ್ದು, ಸ್ಥಳಿಯ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗಿತ್ತು. ಮೇಲ್ನೋಟಕ್ಕೆ ತಾಂತ್ರಿಕ ದೋಷ ಕಂಡುಬಂದಿದ್ದು ಸಾಬೀತಾಗಿದ್ದು ಮರು ಮತದಾನ ನಡೆಸಲು ಅವಕಾಶ ನೀಡಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ತಿಳಿಸಲಾಗಿತ್ತು. ಆಯೋಗವು ಅದಕ್ಕೆ ಸಮ್ಮತಿ ನೀಡಿದ್ದು, ಮತದಾನಕ್ಕೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದರು. ಮರು ಮತದಾನ ನಡೆಯುವ ಸ್ಥಳಗಳು: ಬೀದರ್- ಅಲಿಯಂಬರ(21), ಬೀದರ-ಹಳ್ಳದಕೇರಿ(201), ಶಿವಮೊಗ್ಗ-ಬೈಂದೂರ(174), ತುಮಕೂರು-ತುರುವೇಕೆರ(8), ಹಾವೇರಿ-ರಾಣಿಬೆನ್ನೂರು(5), ಬಾಗಲಕೋಟೆ-ಜಮಖಂಡಿ(27), ಬಾಗಲಕೋಟೆ-ಬಾಗಲಕೋಟೆ(7), ಬಿಜಾಪುರ-ಸಿಂಧಗಿ(216), ಗುಲ್ಬರ್ಗ-ಸೇಡಂ(165), ರಾಯಚೂರು-ಷಹಪುರ(935), ಯಾದಗೀರ್-ಯಾದಗೀರ್(112).

