ಮೂಡುಬಿದಿರೆ: ಆರೋಪಿಗಳನ್ನು ಪೊಲೀಸರು ಸೋಮವಾರ ಇಲ್ಲಿನ ನ್ಯಾಯಲಯಕ್ಕೆ ಹಾಜರುಪಡಿಸಿದಾಗ ಮೂವರಿಗೆ ನ್ಯಾಯಾಂಗ ಬಂಧನ ಮತ್ತು ಒಬ್ಬನಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಪ್ರಾಂತ್ಯದ ಮುಹಮ್ಮದ್ ಇಲಿಯಾಸ್(27), ಬಂಟ್ವಾಳ ನರಿಂಗಾಣದ ಇಬ್ರಾಹಿಂ ಲಿ ಖತ್(26)ಮತ್ತು ಮೂಲ್ಕಿ ಕಿಲ್ಪಾಡಿಯ ಅಬ್ದುಲ್ ರಶೀದ್(39)ಇವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಬಳ್ಳಾರಿ ಜೈಲಿಗೆ ಕಳಿಸಲು ಆದೇಶಿಸಿದರೆ ಪ್ರಮುಖ ಆರೋಪಿ ಬಜ್ಪೆ ಆದ್ಯಪಾಡಿಯ ಮಹಮ್ಮದ್ ಹನೀಪ್(36)ಗೆ ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಬಂಧನಕ್ಕೊಳಗಾದವರ ಪೈಕಿ ಹನೀಪ್ ಕೃತ್ಯದಲ್ಲಿ ನೇರ ಭಾಗಿಯಾಗಿದ್ದು ಉಳಿದವರು ಕೊಲೆಗೆ ಪ್ರಚೋದನೆ ಕೊಟ್ಟವರೆನ್ನಲಾಗಿದೆ. ಆರೋಪಿಗಳನ್ನು ಬೆಳಿಗ್ಗೆ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ ಪೊಲೀಸರು ಬಳಿಕ ಕೋರ್ಟ್ಗೆ ಹಾಜರುಪಡಿಸಿದರು.
ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಗಳು ಪಿಎಫ್ಐ ಕಾರ್ಯಾಕರ್ತರು ಎನ್ನಲಾಗಿದೆ.ಸಾಣೂರಿನ ಅಬ್ದುಲ್ ರೆಹ್ಮಾನ್ ಎಂಬವರ ಪುತ್ರ ಇಲಿಯಾಸ್ ಪ್ರಾಂತ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಅಗಿದ್ದು ಬಿಲ್ಡರೊಬ್ಬರೊಂದಿಗೆ ಕೆಲಸ ಮಾಡುತ್ತಿದ್ದ.
ಮೂಡುಬಿದರೆಯಲ್ಲಿ ಪಿಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತ ಎನ್ನಲಾಗಿದ್ದು ಇಲ್ಲಿ ಈ ಹಿಂದೆ ವಕೀಲರೊಬ್ಬರ ಶೂಟೌಟ್ ಪ್ರಕರಣದ ಬಳಿಕ ನಡೆದ ಸಭೆ ಮತ್ತು ಈಚೆಗೆ ಗಂಟಾಲ್ಕಟ್ಟೆ ಗೋಕಳ್ಳತನ ಮೇಲಿನ ದಾಳಿ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದ ಎನ್ನಲಾಗಿದೆ. ಈ ಸಭೆಯಲ್ಲಿ ಈತ ಹಿಂದೂ ಸಂಘಟನೆ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಎನ್ನಲಾಗಿದೆ. ವಿಹೆಚ್ಪಿ ಮುಖಂಡ ಜಗದೇಶ್ ಶೇಣವ ಹತ್ಯಾ ಯತ್ನದಲ್ಲಿ ಕೂಡ ಈತ ಆರೋಪಿ ಎನ್ನಲಾಗಿದೆ.
ಆದ್ಯಪಾಡಿಯ ಪಿಕೆ. ಹಮ್ಮಬ್ಬ ಅವರ ಮಗ ಮುಹಮ್ಮದ್ ಹನೀಪ್ ಪ್ರಶಾಂತ್ ಕೊಲೆ ಸಂದರ್ಭ ಬೈಕ್ ಸವಾರ ಆಗಿದ್ದ. ಪೆರ್ಮುದೆ ಮತ್ತು ಹಂಡೇಲ್ ಘಟನೆಯಲ್ಲು ಈತ ಭಾಗಿ ಎನ್ನಲಾಗಿದೆ.
ತೋಡಾರು ವ್ಯಕ್ತಿ ಸೂತ್ರಧಾರಿ: ತೋಡಾರಿನ ವ್ಯಕ್ತಿಯೊಬ್ಬರು ಪ್ರಕರಣದ ಸೂತ್ರಧಾರಿ ಎಂದು ಪೊಲೀಸರು ಗುರುತಿಸಿದ್ದು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಮುಂದುವರಿದಿದೆ.




