ಬಂಟ್ವಾಳ: ನಿಯಮ ಬಾಹಿರವಾಗಿ ಪುರಸಭೆಯಲ್ಲಿ ಸೋಮವಾರ ವಿಶೇಷ ಸಭೆ ಕರೆದಿರುವ ಬಗ್ಗೆ ಪುರಸಭೆ ಸದಸ್ಯರೊಬ್ಬರು ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಘಟನೆ ಶನಿವಾರ ನಡೆದಿದೆ.
ಕರ್ನಾಟಕ ಪುರಸಭಾ ಕಾಯಿದೆ 1964 ರ ಸೆಕ್ಷನ್ 48 ರಂತೆ ಯಾವುದೇ ವಿಶೇಷ ಸಭೆಗೆ ಸ್ಪಷ್ಟ 3 ದಿನಗಳ ನೋಟಿಸು ನೀಡುವುದು ನಿಯಮ. ಸಾಮಾನ್ಯ ಸಭೆ ಕರೆಯಲು 7ದಿನದ ಮೊದಲು ಸದಸ್ಯರಿಗೆ ನೋಟೀಸ್ ಜಾರಿ ಮಾಡಿ ಮಾಹಿತಿ ನೀಡಬೇಕು. ಆದರೆ ಸೋಮವಾರ (ಸೆ.19) ನಡೆಯುವ ಸಭೆಯ ಬಗ್ಗೆ ಕೆಲವು ಬಿಜೆಪಿ ಸದಸ್ಯರಿಗೆ ನೋಟೀಸ್ ಲಭ್ಯವಾಗಿಲ್ಲ ಹಾಗೂ ಕೆಲವರಿಗೆ ಶನಿವಾರ ಮಧ್ಯಾಹ್ನ 12ಕ್ಕೆ ಸೂಚನಾಪತ್ರವನ್ನು ನೀಡಲಾಗಿದೆ. ಇದು ಕಾಯಿದೆಯ ಉಲ್ಲಂಘನೆ ಎಂದು ಪುರಸಭೆ ಸದಸ್ಯ ಬಿ.ದೇವದಾಸ್ ಶೆಟ್ಟಿ ಪುರಸಭೆಯ ಮುಖ್ಯಾಧಿಕಾರಿಯವರಿಗೆ ಲಿಖಿತ ದೂರು ನೀಡಲಾಗಿದೆ.
ದೂರು ಸ್ವೀಕಾರಿಸದ ಜಿಲ್ಲಾಧಿಕಾರಿ:
ಎರಡು ದಿನದ ಹಿಂದೆ ಮೊಬೈಲ್ ಮೂಲಕ ನೀಡುವ ದೂರುಗಳನ್ನು ಪುರಸ್ಕರಿಸಿ ಶೀಘ್ರವಾಗಿ ವಿಲೇವಾರಿ ನಡೆಸಲಾಗುವುದು ಎಂದು ತಿಳಿಸಿದ್ದ ಜಿಲ್ಲಾಧಿಕಾರಿಯವರು, ಜನಪ್ರತಿನಿಧಿಯೊಬ್ಬರು ನೀಡಿದ ಮೌಖಿಕ ದೂರಿಗೆ ಲಿಖಿತವಾಗಿ ದೂರು ನೀಡಲು ಸೂಚಿಸಿಅಚ್ಚರಿ ಮೂಡಿಸುವಂತೆ ಮಾಡಿದೆ. ಜನಪ್ರತಿನಿಧಿಗಳ ದೂರನ್ನೇ ಸ್ವೀಕರಿಸದ ಜಿಲ್ಲಾಧಿಕಾರಿಗಳು ಸಾಮಾನ್ಯ ಜನರ ದೂರನ್ನು ಸ್ವೀಕರಿಸಿಯಾರೇ ಎಂಬ ಪ್ರಶ್ನೆ ಮೂಡಿದೆ.

