ಸುದ್ದಿ9 ಮೂಡಬಿದರೆ: ಟಿಕೆಟ್ ವಿಷಯಕ್ಕೆ ಸಂಬಂದಿಸಿದಂತೆ ಪ್ರಯಾಣಿಕರೊಬ್ಬರ ಜೊತೆ ಮಾತಿಗಿಳಿದ ಖಾಸಗಿ ಬಸ್ ನಿರ್ವಾಹಕ ಕ್ಲೀನರ್ ಜೊತೆ ಸೇರಿ ಪ್ರಯಾಣಿಕನಿಗೆ ಹಲ್ಲೆಗೈದು ಬಸ್ನಿಂದ ಹೊರದೂಡಿದ ಘಟನೆ ಇಲ್ಲಿಗೆ ಸಮೀಪದ ವಿದ್ಯಾಗಿರಿಯಲ್ಲಿ ನಡೆದಿದೆ.ಮೂಲ್ಕಿ-ಮೂಡಬಿದ್ರೆ ರಸ್ತೆಯಲ್ಲಿ ಓಡಾಡುವ ಕೆಎ19ಎಎ-3001 ನಂಬರಿನ ಜಾಯ್ಸನ್ ಎಂಬ ಬಸ್ನಲ್ಲಿ ಈ ಘಟನೆ ನಡೆದಿದೆ. ಧರ್ಮಸ್ಥಳದ ನಿವಾಸಿ ಶಂಕರ್ ಶೆಟ್ಟಿ ಎಂಬವರು ಮೂಡಬಿದರೆ ಕಡೆಗೆ ಜಾಯ್ಸನ್ ಬಸ್ನಲ್ಲಿ ಸಂಚರಿಸುತ್ತಿದ್ದರು. ಬಸ್ ಪ್ರಯಾಣಿಕರಿಂದ ತುಂಬಿದ್ದ ಕಾರಣ ಪ್ರಯಾಣಿಕರನ್ನು ಮಾಮೂಲಿಯಂತೆ ನಿರ್ವಾಹಕ ಮುಂದೆ,ಹಿಂದೆ ಹೋಗುವಮತೆ ದಬಾಯಿಸುತ್ತಿದ್ದ.ಈ ಸಂದರ್ಭ ನಿರ್ವಾಹಕ ಬಾಲು ಯಾನೆ ಬಾಲಕೃಷ್ಣ ಎಂಬಾತ ಶಂಕರ್ ಶೆಟ್ಟಿಯವರಿಗೆ ಟಿಕೆಟ್ ನೀಡದೆ ಮತ್ತು ಹಿಂದೆ ಹೋಗಿಲ್ಲ ಎನ್ನುವ ಕಾರಣಕ್ಕೆ ನಿಂದಿಸಿದ್ದ ಎನ್ನಲಾಗಿದೆ.ಈ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಡೋರ್ನಲ್ಲಿ ನೇತಾಡುತ್ತಿದ್ದ ಕ್ಲೀನರ್ ಜೀವನ್ ಎಂಬಾತ ನೇರವಾಗಿ ಶಂಕರ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾನೆ.ಕೊನೆಗೆ ನಿರ್ವಾಹಕ ಮತ್ತು ಕ್ಲೀನರ್ ಸೇರಿ ಶೆಟ್ಟಿಯವರನ್ನು ಬಸ್ನಿಂದ ಹೊರದಬ್ಬಿ ಮುಂದೆ ಹೋಗಿದ್ದಾರೆ.ಶಂಕರ್ ಶೆಟ್ಟಿಯವರು ಗಾಯಗೊಂಡು ಇಲ್ಲಿನ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.ಈ ಕುರಿತು ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬಾಲು ಮತ್ತು ಜೀವನ್ ಬಂದನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ
