ಮೂಡುಬಿದರೆ: ಅಗ್ನಿಶಾಮಕದಳದ ಸ್ವಂತ, ಸುಸಜ್ಜಿತ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ಬಾಡಿಗೆ ಕಟ್ಟಡದಿಂದ ಬಹುಬೇಗ ಮುಕ್ತಿ ಸಿಗುವ ಸಂಭವೂ ಇದೆ. ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು, ಉದ್ಘಾಟನೆಯಾಗಲು ಅಗ್ನಿಶಾಮಕದಳಕ್ಕೆ `ನೀರಿನ ವ್ಯವಸ್ಥೆ’ಯ ಸಮಸ್ಯೆ ಕಾಡುತ್ತಿದೆ.

ಕಡಲಕೆರೆ ನಿಸರ್ಗಧಾಮ ಸಮೀಪ ಸುಮಾರು 2 ಎಕರೆ ಜಾಗದಲ್ಲಿ ರೂ.3.52 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಮುತುವರ್ಜಿಯಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿದ್ದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 18 ವರ್ಷಗಳಿಂದ ಗಂಟಾಲ್ಕಟ್ಟೆಯ ಕಟ್ಟಡವೊಂದರಲ್ಲಿ ಕಾರ್ಯಚರಿಸುತ್ತಿದ್ದ ಮೂಡುಬಿದರೆ ಅಗ್ನಿಶಾಮಕದಳಕ್ಕೆ ಹೊಸ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಹೊಸ ಭರವಸೆಗಳನ್ನು ನೀಡಿದ್ದು ನಿಜ. ಎಲ್ಲವೂ ಸರಿಯಾಗುತ್ತಿರುವಾಗ, ಅಗ್ನಿಶಾಮಕದಳಕ್ಕೆ ಮುಖ್ಯವಾಗಿ ಬೇಕಾದ `ನೀರಿನ ವ್ಯವಸ್ಥೆಯಾಗದಿರುವುದರಿಂದ ಹೊಸಕಟ್ಟಡಕ್ಕೆ ಸ್ಥಳಾಂತರವಾಗುವುದಕ್ಕೆ ವಿಳಂಭವಾಗುತ್ತಿದೆ.
ನೀರಿನ ವ್ಯವಸ್ಥೆಗೆ ಪ್ರಯತ್ನ:
ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿ, ಸ್ಥಳಾಂತರ ಮಾಡುವ ಮೂಲಕ ಮುಂದೆ ಬರುವ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಅಗ್ನಿಶಾಮಕದಳ ಹಿರಿಯ ಅಧಿಕಾರಿಗಳು ಪ್ರಯತ್ನಪಡುತ್ತಿದ್ದಾರೆ. ಬೋರ್ವೆಲ್ ವ್ಯವಸ್ಥೆ ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವಂತೆ ಮೂಡುಬಿದರೆ ಪುರಸಭೆಯವರಲ್ಲಿ 4 ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು.ಪುರಸಭೆ ಹಾಗೂ ಪುತ್ತಿಗೆ ಗ್ರಾ.ಪಂ ಗಡಿಪ್ರದೇಶದಲ್ಲಿರುವ ಅಗ್ನಿಶಾಮಕದಳದ ಕಟ್ಟಡವಿರುವ ಕಾರಣ, ಪುರಸಭಾಧಿಕಾರಿಗಳು ಪರಿಶೀಲನೆ ನಡೆಸುತ್ತೇವೆ. ಪುರಸಭೆ ಮೂಲಕ ಕಟ್ಟಡ ಪರವಾನಿಗೆ ಕೊಡುವಂತಾದರೆ, ನೀರಿನ ವ್ಯವಸ್ಥೆ ಕಲ್ಪಿಸಬಹುದೆಂದು ಮನವರಿಕೆ ಮಾಡಿದ್ದಾರೆ.
ಈ ನಡುವೆ ಅಧಿಕಾರಿಗಳ ಸಂಸದರ ನಿಧಿ, ಸಚಿವರ ನಿಧಿ ಹಾಗೂ ಜಿಲ್ಲಾಧಿಕಾರಿ ನಿಧಿಯ ವಿಶೇಷ ಅನುದಾನ ಮೂಲಕ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಇಲಾಖೆಯು ಚಿಂತನೆ ನಡೆಸುತ್ತಿದೆ.
..
ನೀರಿನ ವ್ಯವಸ್ಥೆಯಾದಲ್ಲಿ ಶೀಘ್ರವೇ ಅಗ್ನಿಶಾಮಕ ಠಾಣೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುತ್ತೇವೆ. ಇನ್ನೆರಡು ದಿನಗಳಲ್ಲಿ ಬೋರ್ವೆಲ್ಗೆ ಪಾಯಿಂಟ್ ಗುರುತಿಸುತ್ತೇವೆ. ಸರ್ಕಾರದ ಅನುದಾನಕ್ಕೆ ಮನವಿ ಸಲ್ಲಿಸಿದ್ದು, ಮಂಜೂರಾದರೇ ಶೀಘ್ರ ನೀರಿನ ವ್ಯವಸ್ಥೆ ಮಾಡುತ್ತೇವೆ.
– ವರದರಾಜನ್
ಮುಖ್ಯ ಅಗ್ನಿಶಾಮಕದಳ ಅಧಿಕಾರಿ
ಮಂಗಳೂರು
ಯಶೋಧರ ವಿ.ಬಂಗೇರ
