ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿ-2015ರ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆಯಾಗಿದ್ದಾರೆ. 13ನೇ ನುಡಿಸಿರಿಯನ್ನು
ಸಾಹಿತಿ ವೀಣಾ ಸಾಂತೇಶ್ವರ್ ಉದ್ಘಾಟಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಜನಿಸಿದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರೊಫೆಸರ್, ವಿಭಾಗ ನಿರ್ದೇಶಕ ಕಲಾವಿಭಾಗದ ಡೀನ್ ಆಗಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ನಿಘಂಟು ಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಲ್ಲಿ ಮೇರು ವಿದ್ವಾಂಸ. ಕನ್ನಡ ಸಂಶೋಧನಾ ಕ್ಷೇತ್ರದ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿದ್ದಾರೆ.

ಸಮ್ಮೇಳನದ ಉದ್ಘಾಟಕರಾಗಿರುವ ಡಾ.ವೀಣಾ ಶಾಂತೇಶ್ವರ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ 39 ವರ್ಷಗಳ ಸುದೀರ್ಘ ಕಾಲ ಇಂಗ್ಲಿಷ್ ಭಾಷಾ ಪ್ರಾಧ್ಯಾಪಕಿಯಾಗಿ ಹಾಗೂ 9 ವರ್ಷ ಅಲ್ಲೇ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ, ಅನುವಾದಕಿ, ಸಂಘಟಕಿ ಹಾಗೂ ಕತೆಗಾರರಾಗಿ ಗುರುತಿಸಿಕೊಂಡಿದ್ದಾರೆ.
ಸ್ತ್ರೀ ಸಂವೇದನೆಯ ಬರಹಗಾರರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾದ್ದಾರೆ ಎಂದು ಡಾ.ಎಂ.ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶಾಲ ವೇದಿಕೆಯಲ್ಲಿ ಸಮ್ಮೇಳನ:
ನವೆಂಬರ್ 26 ರಂದು ಸಂಜೆ ಗಂಟೆ 6.00 ಕ್ಕೆ ಬೃಹತ್ ವೇದಿಕೆ ನುಡಿಸಿರಿ ಉದ್ಘಾಟನೆಗೊಳ್ಳಿದೆ. ಹಾU ಕ ನಿರ್ಮಾಣವಾದ 20,000 ಪ್ರೇಕ್ಷಕರಿಗೆ ಅವಕಾಶವಿರುವ ಬೃಹತ್ ಸಭಾಂಗಣವಿದೆ. ಹೊಸತನದ ಹುಡುಕಾಟ ಎನ್ನುವ ಪ್ರಧಾನ ಪರಿಕಲ್ಪನೆಯಲ್ಲಿ ವಿವಿಧ ಗೋಷ್ಠಿಗಳು, ಸಂಸ್ಮರಣೆ, ಕವಿಸಮಯ-ಕವಿನಮನ, ವಿಶೇಷೋಪನ್ಯಾಸಗಳು ನಡೆಯಲಿದೆ.
ವಿದ್ಯಾರ್ಥಿ ಪ್ರತಿನಿಧಿಗಳು ಪ್ರತಿನಿಧಿ ಶುಲ್ಕವಿಲ್ಲದೆ, ಸಂಪೂರ್ಣ ಉಚಿತವಾಗಿ ನಾಲ್ಕು ದಿನಗಳ ಈ ಸಮ್ಮೇಳನದಲ್ಲಿ ಊಟೋಪಚಾರ-ವಸತಿ ವ್ಯವಸ್ಥೆಯ ಸೌಲಭ್ಯವನ್ನು ಪಡೆದುಕೊಂಡು ಭಾಗವಹಿಸಬಹುದು. ಉಳಿದಂತೆ ಇತರ ಪ್ರತಿನಿಧಿಗಳು 100 ರೂ. ಪ್ರತಿನಿಧಿ ಶುಲ್ಕದೊಂದಿಗೆ ನಾಲ್ಕು ದಿನಗಳ ಕಾಲದ ಈ ಸಮ್ಮೇಳನವನ್ನು ಸದುಪಯೋಗಪಡಿಸಿಕೊಳ್ಳಬಹುದು. ನಾಡಿನ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು, ಕವಿಗಳು ಭಾಗವಹಿಸುವ ಈ ಸಮ್ಮೇಳನವನ್ನು ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಸಮ್ಮೇಳನದ ರೂವಾರಿ ಡಾ.ಎಂ.ಮೋಹನ್ ಆಳ್ವ ವಿನಂತಿಸಿಕೊಂಡಿದ್ದಾರೆ.
ಆಳ್ವಾಸ್ ಪಿಆರ್‍ಒ ಡಾ.ಪದ್ಮನಾಭ ಶೆಣೈ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್, ಉಪನ್ಯಾಸಕರಾದ ವೇಣುಗೋಪಾಲ ಶೆಟ್ಟಿ, ಶ್ರೀನಿವಾಸ ಪೆಜತ್ತಾಯ ಉಪಸ್ಥಿತರಿದ್ದರು.
