ಮೂಡುಬಿದರೆ : ರೋಟರಿ ಜಿಲ್ಲೆ 3180ರಲ್ಲಿ ಈ ವರ್ಷದಲ್ಲಿ ತೀರಾ ಹಿಂದುಳಿದಿರುವ ಗ್ರಾಮಗಳಲ್ಲಿ ವಿದ್ಯುತ್‍ರಹಿತವಾಗಿರುವ 600ಮನೆಗಳನ್ನು ಗುರುತಿಸಿದ್ದು ಅವರಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ತಲಾ 2ಸಾವಿರದಂತೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ರೋಟರಿ ಜಿಲ್ಲೆ 3180ರ ಜಿಲ್ಲಾ ರಾಜ್ಯಪಾಲ ಡಾ.ಭರತೇಶ್ ಹೇಳಿದರು.
ರೋಟರಿ ಸಮ್ಮಲನ್ ಹಾಲ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಈ ಯೋಜನೆಗಾಗಿ ಕುಂದಾಪುರದಲ್ಲಿ 125, ಕಾರ್ಕಳದಲ್ಲಿ 116, ಹಾಗೂ ಚಾಮರಾಜನಗರದಲ್ಲಿ 110ಮನೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಸ್ವಚ್ಛಭಾರತ್ ಯೋಜನೆಯ ಸಹಕಾರಕ್ಕಾಗಿಯೂ ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಟರಿ ಮಕ್ಕಳ ಸುರಕ್ಷಾಕಾರ್ಯಕ್ರಮದಡಿ 140 ಕ್ಲಬ್‍ಗಳ ಮೂಲಕ ಆಯಾ ಜಿಲ್ಲೆಗಳಲ್ಲಿ ಪೋಕ್ಸೋ ಕಾಯಿದೆಯ ಕುರಿತು ಜಾಗೃತಿಮೂಡಿಸಲಾಗುತ್ತಿದೆ. ಮೂಡುಬಿದರೆ ರೋಟರಿ ಕ್ಲಬ್ ಶೌಚಾಲಯ ರಹಿತ ಮನೆಗಳನ್ನು ಗುರುತಿಸಿ ರೋಟಲೆಟ್ಸ್ ಮೂಲಕ ಶೌಚಾಲಯಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರುತ್ತಿದ್ದು ಇದನ್ನು ಇತರ ರೋಟರಿಗಳು ಅನುಸರಿಸುವಂತೆ ಸಲಹೆ ನೀಡಲಾಗುವುದು. ಅಲ್ಲದೆ ರೋಟರಿ ಕ್ಲಬ್ ಮೂಲಕ ಉಚಿತ ವೃತ್ತಿ ಕೌಶಲ್ಯ, ಹೋಮ್‍ನರ್ಸಿಂಗ್ ತರಬೇತಿ, ಡಿಟಿಪಿ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಮೂಡುಬಿದರೆ ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ.ಥೋಮಸ್ ಮಾತನಾಡಿ ರೋಟಲೆಟ್ಸ್ ಯೋಜನೆಯಡಿ ಕಳೆದ ವರ್ಷ ಶೌಚಾಲಯ ರಹಿತ 39 ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದು ಈ ಬಾರಿ 22ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗುತ್ತಿದೆ. ಕಡಲಕೆರೆಯಲ್ಲಿ ಚಿಲ್ಡ್ರನ್ಸ್ ಪಾರ್ಕ್ ಅಭಿವೃದ್ಧಿ ಪಡಿಸಿದ್ದು ಒಂಟಿಕಟ್ಟೆ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲಂಗಾರು ಸೈಂಟ್ ಥೋಮಸ್ ಶಾಲೆಯಲ್ಲಿ `ತೋಟದಿಂದ ಬಿಸಿಯೂಟಕ್ಕೆ’ ಯೋಜನೆಯಡಿ ಶಾಲಾಮಕ್ಕಳಿಗೆ ತರಕಾರಿ ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಮೂಡುಬಿದರೆ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಫ್ರಿಡ್ಜ್ ನೀಡಲಾಗಿದೆ. ರೋಟರಿ ಜಿಲ್ಲಾ ಉಪರಾಜ್ಯಪಾಲ ರಾಮಕೃಷ್ಣ ಮಲ್ಲಾರ್, ಮೂಡುಬಿದರೆ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಮಹಮ್ಮದ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.
