ಮೂಡುಬಿದರೆ: ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವೈಜ್ಞಾನಿಕ ಹೈನೋದ್ಯಮ ಸಂವಾದ ಕಾರ್ಯಕ್ರಮವು ಅ.10ರಂದು ಬೆ.9.30ಕ್ಕೆ ಮೂಡುಬಿದರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದರೆ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ವಲಯ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮೂಡುಬಿದರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರೈತರಿಗೆ ಹೈನುಗಾರಿಕೆಯ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಹಾಲು ಉತ್ಪಾದಕರಿಗಾಗಿ ಹಲವು ಯೋಜನೆಗಳು ಬಂದರೂ ಅದು ರೈತರ ಪಾಲಿಗೆ ಸಿಗದಂತ್ತಾಗಿದೆ ಆದ್ದರಿಂದ ಈ ಎಲ್ಲಾ ಮಾಹಿತಿಗಳನ್ನು ರೈತರಿಗೆ ತಲುಪಿಸಲು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಚಿವ ಕೆ. ಅಭಯಚಂದ್ರ ಜೈನ್ ಸಂವಾದ ಉದ್ಘಾಟಿಸಲಿದ್ದು, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್ ಮಂಜುನಾಥ್, ವೈದ್ಯಕೀಯ ಸೇವಾ ಇಲಾಖೆಯ ಟಿ.ತಿಪ್ಪೇಸ್ವಾಮಿ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿದೇರ್ಶಕ ಸುಚರಿತ ಶೆಟ್ಟಿ ಭಾಗವಹಿಸಲಿರುವರು.
ಅತೀ ಹೆಚ್ಚು ಹಾಲು ಉತ್ಪಾದಿಸಿ ಒಕ್ಕೂಟಕ್ಕೆ ಹಾಕುವ ಮಹಿಳೆ ಮತ್ತು ಪುರುಷನಿಗೆ ಸಮಾರಂಭದಲ್ಲಿ ಅಭಿನಂದಿಸಲಾಗುವುದು.
ಸಂಪನ್ಮೂಲ ವ್ಯಕ್ತಿಗಳಿಂದ ಹೈನುಗಾರರ ಅಭ್ಯುದಯ ಸರ್ಕಾರ ಮತ್ತು ಒಕ್ಕೂಟದ ಪಾತ್ರ, ಲಾಭದಾಯಕ ಹೈನುಗಾರಿಕೆ ಹಾಗೂ ಯಂತ್ರೋಪಕರಣದಲ್ಲಿ ಆಧುನಿಕ ಹೈನುಗಾರಿಕೆ ಎಂಬ ವಿಷಯದ ಸಂವಾದ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮಿಮಿಕ್ರಿ, ಯಂತ್ರೋಪಕರಣಗಳ ಪ್ರದರ್ಶನ, ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ರಘುರಾಮ ಶೆಟ್ಟಿ, ಕೆ.ಪಿ.ಸುಚರಿತ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಬಾಲಚಂದ್ರ, ಯತಿರಾಜ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *