ಮೂಡುಬಿದರೆ: ಮಂಗಳೂರಿನಿಂದ ಕಾರ್ಕಳ ಸಾಣೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ದ್ವಿಪಥ ಕಾಮಗಾರಿಯ ಸರ್ವೆಕಾರ್ಯ ಮುಗಿದಿದ್ದು ಸದ್ಯದಲ್ಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್‍ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಳುವಾಯಿ ಗ್ರಾ.ಪಂ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ ನಡೆದ ಗ್ರಾಮದ ಸ್ವಚ್ಛತಾ ಆಂದೋಲನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ನಿತ್ಯಜೀವನದಲ್ಲಿ ಅಳವಡಿಸಬೇಕು ಆಗಮಾತ್ರ ನರೇಂದ್ರ ಮೋದಿಯವರ ಸ್ವಚ್ಛಭಾರತ್ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳ್ಳಲು ಸಾಧ್ಯ ಎಂದ ಅವರು ಕೇಂದ ್ರಸರ್ಕಾರದಿಂದ ಈಗ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಲಭಿಸುತ್ತಿದ್ದು ಅದನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದರು.
ಬೆಳುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಮಾತನಾಡಿದರು.
ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ವಿಜಯ ಕುಮಾರ್, ಬಂಗ್ಲೆಫ್ರೆಂಡ್ಸ್‍ನ ಸಂಚಾಲಕ ಜಾನ್ ಡಿ’ಸೋಜ, ಉದ್ಯಮಿ ಅಹಮ್ಮದ್, ತುಳುನಾಡು ಯುವಜನಸಂಘದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿಗಾರ್, ರಿಕ್ಷಾ ಚಾಲಕ ಮಾಲಕ ಸಂಘದ ಮಹಮ್ಮದ್ ಖಯ್ಯುಮ್ ಭಾಗವಹಿಸಿದರು. ಪ್ರವೀಣ್ ಜೈನ್ ಸ್ವಾಗತಿಸಿ ವಂದಿಸಿದರು. ಸೋಮನಾಥ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
