ಬಂಟ್ವಾಳ: ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ಬೊಂಡಾಲ ಜಗನ್ನಾಥ ಶೆಟ್ಟಿಯವರ ಮೃತ್ಯುವಿಗೆ ಕಾರಣವಾದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಲಾರಿ ಚಾಲಕ ಹಾಸನದ ಕುಮಾರ್ ಎಂಬಾತನಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರುಪಾಯಿ ದಂಡ ವಿಧಿಸಿ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಕಳೆದ 2012ರ ಅಗೋಸ್ತ್ 1 ರಂದು ರಾತ್ರಿ ಮೆಲ್ಕಾರ್ ಕಡೆಯಿಂದ ಮನೆಗೆ ತೆರಳಲು ತನ್ನ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುತ್ತಿದ್ದ ವೇಳೆ ಬಿ.ಸಿ.ರೋಡು ಕಡೆಯಿಂದ ಬಂದ ಲಾರಿ ಪಾಣೆಮಂಗಳೂರು ಸತ್ಯದೇವತೆ ಕಲ್ಲುರ್ಟಿ ಗುಡಿಯ ಬಳಿ ಕಾರಿಗೆ ಡಿಕ್ಕಿಯಾಗಿ ಬೊಂಡಾಲ ಜಗನ್ನಾಥ ಶೆಟ್ಟಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಅತೀಯಾದ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಲಾರಿ ಚಾಲಕನಿಗೆ ಸೋಮವಾರ ಈ ಶಿಕ್ಷೆ ಪ್ರಕಟಿಸಿದೆ. ನ್ಯಾಯಧೀಶ ಆರ್. ಮಹೇಶ್ ಈ ತೀರ್ಪು ನೀಡಿದ್ದು ಸರ್ಕಾರಿ ಅಭಿಯೋಜಕ ಮಹಮ್ಮದ್ ಶೌಕತ್ ಆಲಿ ವಾದಿಸಿದ್ದರು.
