ವಾರಾಣಸಿ: ವಾರಾಣಸಿಯಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆಗೆ ಬೃಹತ್ ರ್ಯಾಲಿ ಮೂಲಕ ಆಗಮಿಸಿ ಇತರ ಪಕ್ಷಗಳಿಗೆ ನೇರ ಸೆಡ್ಡು ಹೊಡೆದಿದ್ದಾರೆ. ಇಲ್ಲಿನ ಹಿಂದೂ ವಿಶ್ವವಿದ್ಯಾಲಯ ಮುಂಭಾಗದ ಮದನ್ ಮೋಹನ್ ಮಾಲ್ವಿಯಾ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮೋದಿ ಗೌರವ ಸಲ್ಲಿಸಿದ ಬಳಕ ಮೋದಿ ಬನಾರಸ್ ವಿವಿಯಿಂದ 2 ಕಿಲೋ ಮೀಟರ್ ರ್ಯಾಲಿ ನಡೆಸಿದ್ದಾರೆ. ಮೋದಿ ನಾಮಪತ್ರ ಹಿನ್ನೆಲೆಯಲ್ಲಿ ವಾರಾಣಸಿಗೆ ಭಾರೀ ಜನಸಾಗರ ಹರಿದು ಬಂದಿದ್ದು, ವಾರಾಣಸಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲಿ ಸೇರಿದ್ದ ಸಾವಿರಾರು ಜನತೆಯಿಂದ ಮೋದಿಗೆ ಗೆಲ್ಲಲು ಯಾವುದೇ ಅಡ್ಡಿ ಇಲ್ಲ ಎಂಬ ಪರಿಸ್ಥಿತಿಯನ್ನು ನೆನನಪಿಸುವಂತಿತ್ತು.
ವಾರಾಣಸಿಯಲ್ಲಿ ಮೋದಿ ನಡೆಸುತ್ತಿರುವ ರ್ಯಾಲಿ ದೇಶದಲ್ಲಿ ಅತ್ಯಂತ ದೊಡ್ಡ ರ್ಯಾಲಿಯಾಗಿದ್ದು, ದಾರಿಯುದ್ದಕ್ಕೂ ಕಾರ್ಯಕರ್ತರ ದಂಡು ನೆರೆದಿದೆ. ಎಲ್ಲೆಲ್ಲೂ ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ. ಮೋದಿ ಆಗಮಿಸುತ್ತಿರುವ ವಾಹನ ಸಂಪೂರ್ಣ ಕೇಸರಿಮಯವಾಗಿದೆ. ಶ್ವೇತವರ್ಣದ ಉಡುಗೆ ತೊಟ್ಟಿರುವ ನರೇಂದ್ರ ಮೋದಿ ಕಾರ್ಯಕರ್ತರು, ಅಭಿಮಾನಿಗಳಿಗೆ ಕೈಬೀಸುತ್ತಾ ಸಾಗುತ್ತಿದ್ದಾರೆ.
ಬೃಹತ್ ಕಟ್ಟಡಗಳು, ಮನೆಗಳು, ಮರಗಳ ಮೇಲೂ ನಿಂತು ಅಪಾರ ಪ್ರಮಾಣದ ಜನ ನರೇಂದ್ರಮೋದಿಯ ಅಭೂತಪೂರ್ವ ರ್ಯಾಲಿ ವೀಕ್ಷಿಸುತ್ತಿದ್ದಾರೆ. ಅಬಾಲ ವೃದ್ಧರಾಗಿ ಜನತೆ ಭಾಗವಹಿಸಿದ್ದರು.



