ಬಜ್ಪೆ: ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಮೂವರು ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸಸಿಹಿತ್ಲು ತೋಕೂರು ನಿವಾಸಿ ಜಯ ಕೋಟ್ಯಾನ್(35) ಎಂಬವರೇ ಕೊಲೆಯತ್ನಕ್ಕೀಡಾದ ವ್ಯಕ್ತಿಯಾಗಿದ್ದಾರೆ.

ಈ ಘಟನೆಯನ್ನು ಮೊನ್ನೆ ರಾತ್ರಿ ಪಿಎಫ್ಐ ಕಾರ್ಯಕರ್ತ ಆಶಿಕ್ ಮೇಲೆ ನಡೆದ ಹಲ್ಲೆ ಹಲ್ಲೆಗೆ ಪ್ರತೀಕಾರವಿರಬಹುದೆಂದು ಶಂಕಿಸಲಾಗಿದೆ.
ಜಯ ಕೋಟ್ಯಾನ್ ಅವರು ಬೇಕರಿಯಲ್ಲಿ ಕೆಲಸ ಮುಗಿಸಿಕೊಂಡು ಪೆರ್ಮುದೆ ಸಮೀಪದ ಹುಣ್ಸೆಕಟ್ಟೆ ಎಂಬಲ್ಲಿ ತನ್ನ ಸ್ಕೂಟರ್ನಲ್ಲಿ ಶನಿವಾರ ರಾತ್ರಿ 9ರ ಸುಮಾರಿಗೆ ಮನೆಗೆ ಮರಳುತ್ತಿದ್ದ ವೇಳೆ ಮುಸುಕುಧಾರಿ ದುಷ್ಕರ್ಮಿಗಳ ತಂಡ, ಏರ್ಪೋರ್ಟ್ ದಾರಿ ಯಾವುದು ಎಂದು ದಾರಿ ಕೇಳುವ ನೆಪದಲ್ಲಿ ತಲವಾರಿನಿಂದ ಹಲ್ಲೆ ನಡೆಸಿದ್ದು, ಕೈಗೆ ಗಂಭೀರ ಏಟು ತಗಲಿದೆ.
ಹಲ್ಲೆಯ ನೋವಿನಿಂದ ಕಿರುಚಿದ ಜಯ ಕೋಟ್ಯಾನ್ ಅವರ ಬೊಬ್ಬೆ ಕೇಳಿ ಊರವರು ಸ್ಥಳಕ್ಕೆ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಯಾವುದೇ ಸಂಘಟನೆಗೆ ಸೇರದೆ, ಸೌಮ್ಯ ಸ್ವಭಾವದವರಾಗಿದ್ದ ಜಯ ಅವರ ಮೇಲೆ ಹಲ್ಲೆ ನಡೆದಿರುವುದು ಶಂಖೆಗೆ ಕಾರಣವಾಗಿದೆ. ಪಿಎಫ್ಐ ಕಾರ್ಯಕರ್ತರು ಗುರುವಾರ ರಾತ್ರಿ ಹಲ್ಲೆಗೊಳಗಾಗಿದ್ದ ಆಶಿಕ್ ಹಲ್ಲೆಗೆ ಪ್ರತಿಕಾರವಾಗಿ ಈ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ

