ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗಾಂಧೀ ಜಯಂತಿಯನ್ನು ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ.ಪಿ.ಜಿನರಾಜ ಆರಿಗ ವಹಿಸಿದ್ದರು. ಶಿಕ್ಷಕರಾದ ಶ್ರೀ ಫ್ರೆಡ್ರಿಕ್ ಡಿ’ಸೋಜಾರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಗಾಂಧೀಜಿಯವರ ಬಾಲ್ಯಜೀವನ, ಆದರ್ಶ ನಡೆ-ನುಡಿ, ಸತ್ಯ, ತ್ಯಾಗ, ಅಹಿಂಸಾತ್ಮಕ ಧೋರಣೆಗಳ ಕುರಿತು ವಿವರಿಸಿದರು. ಕಾರ್ಯಕ್ರಮವನ್ನು 10ನೇ ತರಗತಿಯ ವಿದ್ಯಾರ್ಥಿನಿ ಮಮತಾ ನಿರೂಪಿಸಿದಳು. ಕಾರ್ಯಕ್ರಮಕ್ಕೆ ಆಗಮಿಸಿದ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು 10ನೇ ತರಗತಿಯ ವಿದ್ಯಾರ್ಥಿನಿಯಾದ ಫಾತಿಮಾ ಶಕೀಲಾ ಸ್ವಾಗತಿಸಿ, ಅಶ್ವಿನಿ ವಂದಿಸಿದಳು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಾತಾವರಣದ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸ್ವಚ್ಛತಾ ಕಾರ್ಯಕ್ರಮವು ಮುಖ್ಯಶಿಕ್ಷಕರಾದ ಶೇಕ್ ಆದಂ ಸಾಹೇಬ್, ನೆಲ್ಯಾಡಿ ಇವರ ಮುಖಂಡತ್ವದಲ್ಲಿ ಜರುಗಿತು. ಎಲ್ಲಾ ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸ್ವಚ್ಛತಾ ಮನೋಧೋರಣೆಯನ್ನು ಗಮನಿಸಿದ ಸ್ಥಳೀಯ ವ್ಯಾಪಾರಸ್ಥರಾದ ಶ್ರೀಮತಿ ಅಸುಂತಾ ಮರಿಯಾ ಡಿ’ಸೋಜಾರವರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಶುಭ ಹಾರೈಸಿದರು.

