ಒಗ್ಗಟ್ಟು, ಪ್ರೀತಿ, ಸೌಹಾರ್ದ,ಪರಸ್ಪರ ಅರಿವು,ಗೌರವಾದರಗಳೇ ಕೌಟುಂಬಿಕ ಜೀವನದ ಅಡಿಪಾಯ. ಈ ಅಡಿಪಾಯಕ್ಕೆ ಗಟ್ಟಿಯಾದ ನೆಲೆ ಒದಗಿರುವುದು ಅವಿಭಕ್ತ ಕುಟುಂಬದ ಅನನ್ಯತೆ. ಅನನ್ಯತೆ ಇಲ್ಲಿ ಹಾಕಿಕೊಟ್ಟಿರುವ ಮಾರ್ಗವೇ ಕಷ್ಟ-ಸುಖದ ಸೋಪಾನಕ್ಕೆ ಕಲಶಪ್ರಾಯವಾಗಿ ಪರಿಣಮಿಸಿದೆ ಎಂದು ಹೇಳಬಹುದು. ನಮ್ಮ ಹಿರಿಯರು ಬದುಕನ್ನು ಕಂಡುಕೊಂಡ ರೀತಿಯಲ್ಲಿ ಸೊಗಸನ್ನು ಅನುಭವಿಸಿದ ರೀತಿಇಂದಿಗೆ ಇತಿಹಾಸವಾಗಿ ಕಂಡರೂ, ಆ ಇತಿಹಾಸದ ಪುನರಾವರ್ತನೆ ಆಗದ ರೀತಿಯಲ್ಲಿ ಒಗ್ಗಟ್ಟು ಮೂಡಿಸಿದ ಅನನ್ಯ ಕೌಟುಂಬಿಕ ಬದುಕಿನಿಂದ ಎಷ್ಟೋ ಮುಂದೆ ಸಾಗಿ ಬಂದಿದ್ದೇವೆ. ನಾನು ನನ್ನದು ಎಂಬುದು ಹಿತವಾಗತೊಡಗಿದೆ. ನಾವು ನಮ್ಮದು,ಎಂಬ ಸಮಷ್ಟಿ ಪ್ರಜ್ಞೆ ದೂರವಾಗತೊಡಗಿದೆ. ಇದಕ್ಕೆಲ್ಲ ಕಾರಣ ಹುಡುಕುತ್ತಾ ಹೊರಟರೆ ಕಾಣ ಸಿಗುವುದು ಸುಖವೆಂಬ ಬಿಸಿಲ್ಗುದುರೆಯನ್ನೇರಿ ಹೊರಟ ಅಂಶ ಕಾಣಸಿಗದಿರದು.
ಬದುಕನ್ನು ಸ್ವಾರ್ಥದ ಪರದೆಯಿಂದ ಕಳಚಿಕೊಂಡವರಿಗೆ ಎಲ್ಲವೂ ಒಳಿತಾಗಿ ಕಾಣುತ್ತದೆ. ಜೀವನ ನಿರ್ವಹಣೆಗಾಗಿ ಪಡೆದುಕೊಂಡ,ಗಳಿಸಿಕೊಂಡ ಉದ್ಯೋಗದಲ್ಲಿ ಸಂತೃಪ್ತಿ ಕಾಣುತ್ತದೆ. ಲೋಲುಪತೆಯೇ ಪರಮಗುರಿಯಾಗಿಸಿಕೊಂಡವರಿಗೆ ಸಮಷ್ಟಿ ಪ್ರಜ್ಞೆ ಎಂಬುದು ದೂರದ ಮಾತಾಗುತ್ತದೆ. ಅಂದರೆ ಸುಖದ ತ್ಯಾಗ ಸೂತ್ರ ಇಲ್ಲಿ ಬರಬೇಕೆಂದಿಲ್ಲ. ಬರಬೇಕಿರುವುದು ಅರಿತು, ಕಲೆಯುವ ,ಕಲೆತು ಜೀವಿಸುವ ಜಾಣ್ಮೆ. ಇಂತಹ ಜಾಣ್ಮೆ ನಮ್ಮ ಹಿರಿಯರಲ್ಲಿ ಇದ್ದದ್ದರಿಂದಲೇ ಸೊಗಸಾದ, ಆರೋಗ್ಯಪೂರ್ಣವಾದ ಬದುಕನ್ನು ಸಾಗಿಸಿದರೆಂಬುದರಲ್ಲಿ ಸಾರಸತ್ವದ ಬದುಕಿನ ಅರ್ಥಕಂಡುಕೊಂಡರು. ಸುಂದರ ಬದುಕಿನ ಸಾರಸತ್ವ ವಿಭಕ್ತ ಕುಟುಂಬಗಳಿಗೆ ಬೇಡವೆಂದಲ್ಲ. ಆದರೆ ಅವಿಭಕ್ತ ಕುಟುಂಬದ ಜಂಜಾಟ, ಹೊರೆ ಬೇಡ ಎಂಬ ಭಾವನೆ ಬಲವಾಗಿಇದ್ದುದರಿಂದಲೇ ಅವಿಭಕ್ತ ಕುಟುಂಬದ ಮಹತ್ವ ಕಡಿಮೆಯಾಗತೊಡಗಿತೆನ್ನುವುದರಲ್ಲಿ ತರ್ಕವಿದೆ.
ಹಾಗಿದ್ದ ಮಾತ್ರಕ್ಕೆ ಕೌಟುಂಬಿಕ ತಳಹದಿಯಲ್ಲಿ ಬರುವ ಮಾನವೀಯ, ರಕ್ತಸಂಬಂಧ, ಬಾದರಾಯಣ ಸಂಬಂಧಗಳ ಪರಿವೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗಬಹುದು. ಬೇಕು! ಅದು ದೈವದೇವರುಗಳ ಗುಡಾಣದೊಳಗೆ ಬಂಧಿಯಾಗಿದೆ. ದೈವದೇವರುಗಳಿಗಂಜಿ ಕುಟುಂಬದ ಕಲೆಯುವಿಕೆಯಲ್ಲಿ ಒಂದೆಡೆ ಕಲೆಯುವ ಮಟ್ಟಿಗಷ್ಟೆ ಸೀಮಿತವಾಗಿದೆ. ಮುಂದಿನ ಪೀಳಿಗೆಗೆ ಅದನ್ನು ದಾಟಿಸಬೇಕಾದ ಪ್ರಜ್ಞೆ ಇದ್ದರೂ, ಸ್ವಪ್ರತಿಷ್ಟೆ, ಅಂತರ, ಪ್ರತಿಷ್ಟೆ ಕಾಯ್ದುಕೊಳ್ಳುವ ಭರದಲ್ಲಿ ತಮ್ಮ ಮಕ್ಕಳನ್ನು ಸಮಷ್ಟಿ ಪ್ರಜ್ಞೆಯ ವಲಯದಿಂದ ಆಚೆ ತಳ್ಳುವ, ಅಥವಾ ಭಾಗವಾಗಲು ಬಿಡದೆ, ಬಿಡಲೊಪ್ಪದೆ, ಒಪ್ಪಿದರೂ, ಎಲ್ಲಿಯಾದರೂ ತಮ್ಮ ಮಕ್ಕಳ ಹೆಗಲ ಮೇಲೆ ಜವಾಬ್ದಾರಿಯ ಭಾರ ಬೀಳುತ್ತದೋ ಎಂದು ಭಾವಿಸಿ, ದ್ವೀಪವಾಗಬಯಸುವವರು ಅದೆಷ್ಟೋ?.
ಬದುಕನ್ನು ಕಂಡುಕೊಂಡ ಬಗೆಯಲ್ಲಿ ಸುಂದರ ಆರೋಗ್ಯಪೂರ್ಣ ಚಿಂತನೆಇದ್ದರೂ, ತರಬಹುದಾದ ಪ್ರೀತಿ,ಬಾಂಧವ್ಯದ ಬೆಸುಗೆ ಇದ್ದರೂ,ಅವುಗಳು ಬಂದು ಸೇರುವುದು ಪರಸ್ಪರ ಅರಿತು ಹಾಕಬಹುದಾದ ಹೆಜ್ಜೆಗಳಿದ್ದಾಗ. ಆದರೆ ಆ ಹೆಜ್ಜೆಗಳೇ ಹಿಂದಣ ಚಲಿಸಿದಾಗ, ಗಡಿಯಾರದ ಮುಳ್ಳನ್ನು ಹಿಂದಕ್ಕೋಡಿಸಿದಂತಹ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಸಾರದ ಸಾರಸತ್ವ ಕಳೆದುಹೋಗುವ ಪರಿಸ್ಥಿತಿ ಉಂಟಾಗುವಲ್ಲೊಂದು ಬಗೆಯ ಅಪಾಯವಂತೂ ಇದೆ. ಅದೆಂದರೆ ರಕ್ತಸಂಬಂಧ ಬಿಡಿ, ಮಾನವೀಯ ಸಂಬಂಧಗಳ ಅರ್ಥಕಳೆದುಕೊಳ್ಳುವ, ಪೊರೆ ಕಳಚುವ ಸವಾಲು ಎದುರಾಗುವಂತಹ ಪರಿಸ್ಥಿತಿಗೆ ಅರಿಯದೆ ಒಡ್ಡಿಕೊಳ್ಳುವ ಜಾಯಮಾನ ರೂಢಿಯಾಗಿರುವುದು. ಇದೊಂದು ಬಗೆಯ ಕಾಲದ ಪಲ್ಲಟ ಎಂದುಕೊಂಡರೂ, ನಾವು ತಪ್ಪೆಸಗಿದ್ದರೂ, ಅದನ್ನು ವ್ಯವಹಾರಿಕ ಮಾಡಿಕೊಂಡಂತೆ ವೃದ್ಧ ಮಾತಾಪಿತೃರನ್ನು ಕಡೆಗಣಿಸುವ, ಮನೆಯ ಹಿರಿಯರನ್ನು ಅವಗಣಿಸುವ ಜಾಯಮಾನವನ್ನು ಸಾಮಾನ್ಯ ಎಂಬಂತೆ ಬಿಂಬಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಭಾವನೆ ಮೂಡಿರುವುದು, ಅವಿಭಕ್ತ ಮನೋಸ್ಥಿತಿ ಕಳಚಿಕೊಂಡ, ವಿಭಕ್ತ ಚೌಕಟ್ಟಿನೊಳಗೆ ಬಂಧಿಯಾದ ಪ್ರಕ್ರಿಯೆಯೇ ಹೊರತು, ನೆಮ್ಮದಿ ಹುಟ್ಟುಹಾಕಿದ ಬೆಳವಣಿಗೆಯಂತೂ ಖಂಡಿತ ಅಲ್ಲವೆಂಬುದನ್ನು ಒಪ್ಪಿಕೊಳ್ಳಲೇಬೇಕು.
ತುಳುನಾಡು ಎಂದು ಕರೆಯಿಸಿಕೊಳ್ಳುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕಾಸರಗೋಡು ವ್ಯಾಪ್ತಿಯಲ್ಲಿ ಪ್ರಭಾವಶಾಲಿಯಾಗಿ ನಡೆದುಬಂದ ಕೂಡುಕುಟುಂಬ ಪದ್ಧತಿ ಇದೀಗ ಅಲ್ಲಲ್ಲಿ ಪಳೆಯುಳಿಕೆಗಳಂತೆ ಕಂಡುಬರುವಲ್ಲಿ ಆಧುನಿಕ ಪ್ರಭಾವವಿದೆ ಎಂದು ಹೇಳಿಕೊಳ್ಳಬಹುದಾದರೂ, ಅದಕ್ಕಿಂತ ಮಿಗಿಲಾಗಿ ಖಾಸಗಿತನ ಆಪ್ತತೆ ಬೆಳೆಸಿಕೊಂಡ ಮನೋಸ್ಥಿತಿ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯುವಣತಿಲ್ಲ. ಇದರ ಹೊರತಾಗಿಯೂ ಮೂರುಜಿಲ್ಲೆಗಳಲ್ಲಿ ಪ್ರಮುಖವಾಗಿ ಬಂಟ ಮನೆತನಗಳು ಅವಿಭಕ್ತ ಕುಟುಂಬ ಪದ್ಧತಿಗೆ ಮಾರುಹೋಗಿ, ಮೊದಲಿನಷ್ಟಲ್ಲದಿದ್ದರೂ, ಇನ್ನೂ ಕೂಡಾ ಕೂಡುಕುಟುಂಬದಲ್ಲಿ ಆಪ್ತತೆ ಕಾಯ್ದುಕೊಂಡಿವೆ ಎಂಬುದನ್ನು ಸಂತೋಷದ ಬೆರಗುಗಣ್ಣಿನಿಂದ ಗಮನಿಸುತ್ತಾ ಉಲ್ಲೇಖಿಸಲೇ ಬೇಕು. ಈ ರೀತಿ ಹೆಸರಿಸಬಹುದಾದರೆ ಹಿರಿಯ ಕವಿ ಇತ್ತೀಚೆಗೆ ನಮ್ಮನ್ನಗಲಿದ ಕಯ್ಯಾರ ಕಿಂಞಣ್ಣ ರೈ, ಮೂಡಬಿದಿರೆಯ ಮೋಹನ ಆಳ್ವ ಮುಂಚೂಣಿಗೆ ಬಂದು ನಿಲ್ಲುತ್ತಾರೆ. ಕಯ್ಯಾರರ ಹಿರಿಯರ ಕುಟುಂಬದ ಸಂಖ್ಯೆ 100ರ ಗಡಿದಾಟಿತಂತೆ. ಮೋಹನಾಳ್ವರ ಕುಟುಂಬವಂತೂ, ಅವರು ಒಂದೆಡೆ ಸೇರುವ ಸಂಭ್ರಮವಂತೂ ಕೂಡುಕುಟುಂಬದ ಸೊಗಸಿಗೆ ಆದರ್ಶಪ್ರಾಯವಾಗಿ ನಿಲ್ಲುತ್ತದೆ ಎಂದು ಹೇಳುವಾಗ ಮೈಮನರೋಮಾಂಚನಗೊಳ್ಳುತ್ತದೆ. ಇಂತಹ ಆದರ್ಶಪರಂಪರೆಯ ಕೊಂಡಿಗಳು ಬದುಕಿನ ಅಂಧಕಾರ, ನಿರಾಸೆ, ಸ್ವಾರ್ಥಕ್ಕೆ ಸವಾಲಾಗಿ ನಿಂತು, ಬದುಕಿನ ಬಗೆಗೆ ಭರವಸೆಯ ಬೆಳಕು ಮೂಡಿಸುತ್ತದೆ ಎನ್ನುವಲ್ಲಿ ಉತ್ಪ್ರೇಕ್ಷೆಯಂಂತೂ ಇಲ್ಲ.
60ಕ್ಕೂ ಮಿಕ್ಕಿದ ಮನೆಸದಸ್ಯರ ಕೂಡುಕುಟುಂಬದಲ್ಲಿ ಕೃಷಿ ಕಾರ್ಯವಂತೂ ಬೆವರು ಹದಮೂಡಿಸಿದ ಒಗ್ಗಟ್ಟು ಸೂತ್ರ ಬಂಧಿ. ಕೂಲಿಕಾರರು ಅತೀವಿರಳ ಎನಿಸುವಂತಹ ಈ ಕಾಲದಲ್ಲಿ ಕೂಡುಕುಟುಂಬ ಇದ್ದರಂತೂ ಅತಿವಿರಳ ಕೂಲಿಕಾರರಿಗೆ ನೇರ ಸವಾಲು. ಮನೆಮಂದಿಗೆ ಬೇಕಾಗುವ ಆಹಾರಪದಾರ್ಥಗಳು ಮನೆಸದಸ್ಯರ ಕೈಚಳಕದಲ್ಲಿ ಕರತಲಾಮಕವಾಗುವಲ್ಲಿ ಹೆಚ್ಚೇನು ಕಷ್ಟವಲ್ಲ. ಸೊಪ್ಪು,ತರಕಾರಿಗಳು ಮನೆಯ ಕಾರ್ಯಕ್ಕೆ ಸಂದಾಯವಾಗಿ, ಪೇಟೆ ಸೇರಿ ಕೈತುಂಬ ಕಾಂಚಾಣ ಎಣಿಸಿದ ದಿನಗಳೆಷ್ಟೋ. ಇನ್ನು ಮನೆಯಲ್ಲಿ ಬಿಡಿ, ನೆರೆಕರೆಯ, ಊರ ಮಂದಿಯ ಮದುವೆ, ಇನ್ನಿತರ ಶುಭ ಸಮಾರಂಭಗಳಲ್ಲಿ ಇರುತ್ತಿದ್ದ ತಿಂಗಳು ಗಟ್ಟಲೆ ಸಂಭ್ರಮದಲ್ಲಿ ಅವಿಭಕ್ತ ಕುಟುಂಬಗಳು ಕಲೆಯುತ್ತಿದ್ದ ರೀತಿಯಂತೂ ಸಂಭ್ರಮದ ಕಲರವ. ಈ ರೀತಿ ಕೃಷಿ ಕಾರ್ಯದಲ್ಲಿ, ಶುಭಸಮಾರಂಭದ ಅಟ್ಟಣೆಯಲ್ಲಿ ಒಂದಾಗುತ್ತಿದ್ದ ರೀತಿ ಸರ್ವ ರೀತಿಯ ಶ್ರಮವನ್ನು ಮರೆಸುತ್ತಿದ್ದುದರಲ್ಲಿ ಸಂತೃಪ್ತಿ, ನೆಮ್ಮದಿ ಸಿಗುತ್ತಿದ್ದುದ ಬಗೆಯಂತೂ ಅರ್ಥಪೂರ್ಣ.
ಭೂ ಮಸೂದೆ ಕಾಯ್ದೆಯ ಪರಿಣಾಮಕಾರಿ ಸನ್ನಿವೇಶದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚು ಪ್ರಭಾವಿಯಾದ ಸಂದರ್ಭದಲ್ಲಿ ತಮ್ಮ ಮಕ್ಕಳು ಉನ್ನತ ವಿದ್ಯೆಯನ್ನು ಕಲಿತು, ಒಳ್ಳೆಯ ಉದ್ಯೋಗದ ಹಾದಿ ಹಿಡಿದಾಗ, ಅವಿಭಕ್ತ ಕುಟುಂಬದ ಆಶಯ,ನೆಲೆಗಳು ಅದುರತೊಡಗಿದ್ದು ಸಹಜವೇ. ಇದು ಒಟ್ಟಾರೆ ಪ್ರಕ್ರಿಯೆಯಾಗಿ ಪರಿಣಮಿಸಿತೇ ಹೊರತು, ಇಂದಿಗೂ ಅವಿಭಕ್ತ ಕುಟುಂಬದ ನೆಲೆಗಳು ಆದರ್ಶವಾಗಿ ಉದಾಹರಣೆಗಳು ಅಲ್ಲಲ್ಲಿ ಕಾಣಸಿಗುವುದು ಪುಣ್ಯವಿಶೇಷವೆಂದೇ ಹೇಳಬೇಕು.
ಎಲ್ಲವನ್ನು ಹಣದ ಥೈಲಿಯಿಂದಲೇ ಅಳೆಯತೊಡಗಿರುವ ವ್ಯವಸ್ಥೆಯ ನಡುವೆ ಕೌಟುಂಬಿಕ ಒಗ್ಗಟ್ಟು ತರುವ ಕೂಡುಕುಟುಂಬದ ಆಶಯಗಳು ಇಂದಿಗೂ ಮೊಳಗತೊಡಗಿರುವುದು ಈ ಮಣ್ಣಿನ ಸಾರಸತ್ವವನ್ನು ಬಗೆದ ಮಂದಿಯಲ್ಲಿ ಮಾತ್ರ ಆಪ್ಯಾಯಮಾನವಾಗಿ ಕಂಡುಬರುತ್ತಿದೆ. ಇದು ಭರವಸೆಯ ಮಿಂಚಾಗಿ ಕಂಡುಬರುವುದರಲ್ಲಿ ಕೃಷಿ ಸಂಸ್ಕ್ರತಿಯಲ್ಲಿ ಬೆಳೆದುಬಂದಲ್ಲಿ ಮಾತ್ರ ಸಾಧ್ಯ. ಕೃಷಿಭೂಮಿಯನ್ನು ಲೇಔಟ್ ಆಗಿ ಪರಿವತರ್ಿಸಿದ, ದೈವದೇವರುಗಳನ್ನು ಹಿರಿಯರ ಸುಪದರ್ಿಗೊಳಪಡಿಸಿ, ತಮ್ಮ ಹೆಂಡತಿ, ಮಕ್ಕಳ ಸಾಂಸಾರಿಕ ಚೌಕಟ್ಟಿಗಷ್ಟೇ ಸೀಮಿತವಾದ ಕಾಲಘಟ್ಟದಲ್ಲಿ, ಅವಿಭಕ್ತ ಕೂಡುಕುಟುಂಬ ಭೂತಕಾಲದ ಭವಿತವ್ಯವಾಗಿ ಉಳಿದುಬಿಡುತ್ತದೆ. ಅವಿಭಕ್ತ ಕುಟುಂಬದ ಕಡೆಗೆ ತಮ್ಮ ಸಾಂಸಾರಿಕ ನೆಲೆಯನ್ನು ಕೊಂಡೊಯ್ಯವ ಮಾತಿಗಿಂತ, ವಿಭಕ್ತ ನೆಲೆಯನ್ನು ಕಂಡುಕೊಂಡ ಸಾಂಸಾರಿಕ ಬದುಕನ್ನು ಅವಿಭಕ್ತ ನೆಲೆಗೊಂಡ ಮನಸ್ಸುಗಳು ಕಲೆಯುವಂತೆ ಮಾಡಿ, ಆಮೂಲಕ ಸಾಂಸಾರಿಕ ಮೌಲ್ಯಗಳನ್ನು ರಕ್ಷಿಸುವುದು ಹೆಚ್ಚು ಮುಖ್ಯವಾಗುತ್ತದೆ. ಅಳಿದುಳಿದ ಭೂಮಿಯನ್ನು ಹಸನುಗೊಳಿಸಿ, ಅವಿಭಕ್ತ ಕುಟುಂಬ ಪ್ರತಿಪಾದಿಸುವಂತಹ ಪರಸ್ಪರ ರಕ್ತಸಂಬಂಧಗಳು- ಮಾನವೀಯ ಸಂಬಂಧಗಳು ಹದಗೆಡದಂತೆ, ರಕ್ಷಿಸುವುದರ ಜತೆಗೆ ಮುಂದಿನಪೀಳಿಗೆಗೆ ಅದನ್ನು ದಾಟಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕು. ಇಲ್ಲದಿದ್ದ ಪಕ್ಷದಲ್ಲಿ ಆತ ಸಂಬಂಧಿಯೇ ಆದರೂ, ಆ ಸಂಬಂಧಗಳು ಗೌಣವಾಗಿ ಬಿಡುತ್ತದೆ. ಹಿರಿಯರನ್ನು ಪ್ರೀತಿಸಿ, ಗೌರವಿಸುವ, ಆದರಿಸುವ ವಾತಾವರಣ ಹೆಚ್ಚು ಆಪ್ತವಾಗಬೇಕು. ಮಕ್ಕಳಿಗೆ ರಕ್ತಸಂಬಂಧಿಗಳು, ಬಾದರಾಯಣ ಸಂಬಂಧಿಗಳು ಯಾರೇ ಆಗಲಿ ಅವರನ್ನು ಪರಿಚಯಿಸಿ, ಆ ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿಯುವ ಕೆಲಸವಾಗಬೇಕು. ಕಷ್ಟ-ಸುಖದಲ್ಲೂ ಒಂದಾಗುವ ಮೌಲ್ಯಗಳು ಕುದುರಬೇಕು. ಇದು ವಿಭಕ್ತ ಕುಟುಂಬವಾದರೂ, ಈ ಮೂಲಕ ಅವಿಭಕ್ತ ಕುಟುಂಬದ ನೆಲೆಗಳನ್ನು, ಮೌಲ್ಯಗಳನ್ನು ರಕ್ಷಿಸಲು ಸಾಧ್ಯ.

ಗೋಪಾಲ್ ಅಂಚನ್

 

By suddi9

Leave a Reply

Your email address will not be published. Required fields are marked *