ಮೂಡುಬಿದಿರೆ: ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಭಾನುವಾರ ಮುಂಜಾನೆ ಬೈಕ್ನಲ್ಲಿ ಬರುತ್ತಿದ್ದ ಯುವಕರಿಗೆ, ಹಂಡೇಲುಸುತ್ತು ಬಳಿ ಅಪರಿಚತ ತಂಡ ಮಾರಣಾಂತಿಕ ಹಲ್ಲೆ ನಡೆಸಿದೆ.
ನಾರಾವಿ ನಿವಾಸಿ ವಾಸು ಆಚಾರ್ಯ ಹಾಗೂ ಅಶೋಕ್ ಗಂಭೀರ ಗಾಯಗೊಂಡವರು.
ಕುಲಶೇಖರ ಗಣೇಶ ವಿಸರ್ಜನಾ ಮೆರವಣಿಗೆ ಶನಿವಾರ ಬ್ಯಾಂಡ್ವಾದನಕ್ಕೆ ಹೋದ ಇವರು ಭಾನುವಾರ ಮುಂಜಾನೆ ಮನೆಗೆ ಮರಳುತ್ತಿದ್ದರು. ಇವರನ್ನು ಹಿಂಬಾಲಿಸಿಕೊಂಡು ಬಂದ ತಂಡವು, ಪುತ್ತಿಗೆ ಗ್ರಾಮದ ಹಂಡೇಲುಸುತ್ತು ಬಳಿ ಅಡ್ಡಗಟ್ಟಿ ತಲೆ ಹಾಗೂ ಕೈಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು, ಇತರ ವಾಹನ ಸವಾರರ ನೆರವಿನೊಂದಿಗೆ ಗಾಯಗೊಂಡ ಯುವಕರನ್ನು ಮಂಗಳೂರಿನ ಆಸ್ಪತ್ರೆ ಸಾಗಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.





