ಬಂಟ್ವಾಳ: ಜನರಿಗೆ ಆರೋಗ್ಯ ಭಾಗ್ಯ ಕರುಣಿಸ ಬೇಕಾದ ಆರೋಗ್ಯ ಕೇಂದ್ರ್ರವೇ ಪರಿಸರದ ಜನರಿಗೆ ರೋಗ ಹರಡುವ ಭೀತಿ ಹುಟ್ಟಿಸುತ್ತಿದೆ. ಆರೋಗ್ಯ ಕೇಂದ್ರದ ಆವರಣದೊಳಗೆ ಆಳೆತ್ತರಕ್ಕೆ ಹುಲ್ಲು, ಪೊದೆಗಳು ಬೆಳೆದು ವಿಷ ಜಂತುಗಳಿಗೆ ಆವಾಸ ಸ್ಥಾನವಾಗಿದೆ. ಜಾನುವಾರುಗಳಿಗೆ ಹುಲ್ಲು ಮೇಯುವ ಗೋಮಾಳವಾಗಿದೆ.

ಇದು ಬಿ.ಸಿ.ರೋಡಿನ ಕೈಕಂಬ ಬಳಿಯಿರುವ ಸಂಚಾರಿ ಆರೋಗ್ಯ ಕೇಂದ್ರದ ದುಃಸ್ಥಿತಿ. ಹೆಸರಿಗೆ ಮಾತ್ರ ಇಲ್ಲೊಂದು ಸಂಚಾರಿ ಆರೋಗ್ಯ ಕೇಂದ್ರವಿದೆ. ಆದರೆ ಇಲ್ಲಿನ ಸಿಬ್ಬಂದಿಯೋರ್ವ ತನ್ನ ಜವಬ್ದಾರಿ ಮರೆತಿರುವುದರಿಂದ ಸಂಚಾರಿ ಆರೋಗ್ಯ ಕೇಂದ್ರ ಇದ್ದು ಇಲ್ಲದಂತಿದೆ. ಇಲ್ಲಿ ವೈದ್ಯಾಧಿಕಾರಿ ನಿಯೋಜನೆಯ ಮೆರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಸಹಾಯಕಿ ಹಾಗೂ ಚಾಲಕ ಶಿಬಿರಗಳಿಗೆ ತೆರಳುತ್ತಾರೆ. ಇಲ್ಲಿ ಪೂರ್ಣಾವಧಿ ಕರ್ತವ್ಯದಲ್ಲಿರ ಬೇಕಾದ ಡಿಗ್ರೂಪ್ ನೌಕರ ಕಚೇರಿಗೆ ಬರುವುದೇ ಅಪರೂಪ.
ಸಂಚಾರಿ ಆರೋಗ್ಯ ಕೇಂದ್ರದ ಒಳಭಾಗದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ಇದರ ನಿರ್ವಹಣೆ ನೋಡಿಕೊಳ್ಳ ಬೇಕಾ ಡಿ ಗ್ರೂಪ್ ಗುಮಸ್ತ ಕಚೇರಿಯಲ್ಲಿರುವ ಬದಲು ಮನೆಯನ್ನೇ ಕಚೇರಿ ಮಾಡಿಕೊಂಡಂತಿದೆ. ಕಚೇರಿಯ ಬಾಗಿಲು ತೆರೆದಿಟ್ಟು ಹಿಂಬದಿಯಲ್ಲಿರುವ ಮನೆಯಲ್ಲಿಯೇ ಇರುವುದರಿಂದ ಸಿಬ್ಬಂದಿಗಳಿಲ್ಲದೆ ಸಂಚರಿ ಆರೋಗ್ಯ ಕೇಂದ್ರ ಖಾಲಿ ಖಾಲಿಯಾಗಿರುತ್ತದೆ. ಇದೇ ಆವರಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಸತಿಗೃಹ ಇದ್ದು ಹುಲ್ಲುಗಳು ಬೆಳೆದು ಇಲಿ, ಹೆಗ್ಗಣ, ಹಾವು, ಚೇಳು, ಮೊದಲಾದ ವಿಷಜಂತುಗಳು ತುಂಬಿಕೊಂಡು ಭೀತಿಯಿಂದ ಜೀವಿಸುವ ಸ್ಥಿತಿ ನಿರ್ಮಾಣಗೊಂಡಿದೆ. ನಿತ್ಯವೂ ಕೌಂಪೌಂಡ್ ಗೇಟ್ ತೆರೆದೆ ಇರುವುದರಿಂದ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಇಲ್ಲಿಗೆ ದಿಡೀರ್ ಭೇಟಿ ನೀಡಿದ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆಯವರ ನಿಯೋಗ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಈವರೆಗೂ ಪರಿಸ್ಥಿತಿ ಸುಧಾರಿಸಿಲ್ಲ. ಡಿಗ್ರೂಪ್ ನೌಕರನ ಬೇಜವಬ್ದಾರಿಯಿಂದ ಸಂಚಾರಿ ಆರೋಗ್ಯ ಕೇಂದ್ರಕ್ಕೆ ಈ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆರೋಪಿಸಿರುವ ಸ್ಥಳೀಯರು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
