ಬಂಟ್ವಾಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಂಭೂರು, ನರಿಕೊಂಬು ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲಾ ವಠಾರದಲ್ಲಿ ಬುಧವಾರ ನಾನಾ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಭಜನೆ, ಅಂಗನವಾಡಿ ಪುಟಾಣಿಗಳಿಂದ ವಿವಿಧ ವಿನೋದಾವಳಿಗಳು, ಸಂಜೆ ವೈಭವದ ಶೋಭಾಯಾತ್ರೆಯೊಂದಿಗೆ ಉತ್ಸವ ಸಮಾಪನಗೊಂಡಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಯುವ ಬ್ರಿಗೇಡ್‍ನ ರಾಜ್ಯ ವಕ್ತಾರ ಕೃಷ್ಣ ಉಪಾಧ್ಯಾಯ ದಿಕ್ಸೂಚಿ ಬಾಷಣ ಮಾಡಿ ಸನಾತನ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಹಬ್ಬಗಳ ಪಾತ್ರ ಮಹತ್ತರವಾದುದು. ಶ್ರದ್ಧಾಭಕ್ತಿಪೂರ್ವಕವಾದ ನಂಬಿಕೆಯೊಂದಿಗೆ ಆಚರಣೆಗಳ ನಿಜಾರ್ಥವನ್ನು ಅರಿತು ಆಚರಿಸಿದಾಗ ಆ ಮೂಲಕ ಮುಂದಿನ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದಂತಾಗುತ್ತದೆ. ಎಲ್ಲಡೆಯೂ ಪರಿಸರ ಸ್ನೇಹಿಯಾದ ನಿಸರ್ಗ ಸಹಜ ಗಣಪತಿಯ ವಿಗ್ರಹವನ್ನು ತಯಾರಿಸಿ ಪೂಜಿಸುವ ಮೂಲಕ ಪರಿಸರ ಹಾನಿಯನ್ನು ತಡೆಗಟ್ಟಲು ಸಂಘಟನೆಗಳು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಯುವ ಬ್ರಿಗ್ರೇಡ್ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದರು.
ಧಾರ್ಮಿಕ-ಸಾಮಾಜಿಕ ನೇತಾರ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಕೇಶವ ಶಾಂತಿ ಧಾರ್ಮಿಕ ಉಪನ್ಯಾಸ ನೀಡಿದರು. ದಿನಕರ ಶೆಟ್ಟಿ ಅಂತರ, ತಾಲೂಕು ಪಂಚಾಯತು ಅಧ್ಯಕ್ಷ ಯಶವಂತ ದೇರಾಜೆ, ಗ್ರಾಮ ಪಂಚಾಯತು ಅಧ್ಯಕ್ಷ ಯಶೋಧರ ಕರ್ಬೆಟ್ಟು, ಉದ್ಯಮಿಗಳಾದ ಪದ್ಮನಾಭ ಮಯ್ಯ ಎನ್., ಬಿ. ರಘು ಸಪಲ್ಯ, ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾಧಕರ ಫೆಡರೇಶನ್ ಅಧ್ಯಕ್ಷ ಮಾಧವ ಕರ್ಬೆಟ್ಟು, ಶಂಬೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲಿಯನ್, ಸಮಿತಿ ಅಧ್ಯಕ್ಷ ಕಮಲಾಕ್ಷ ಭೀಮಗದ್ದೆ ಮೊದಲಾದವರಿದ್ದರು.
