ಬಂಟ್ವಾಳ : ದೇವರ ಪೂಜೆಯನ್ನು ಸಮಾಜಸೇವೆ ರೂಪದಲ್ಲಿ ಮಾಡುತ್ತಾ ಬಂದಿರುವುದು ಇಲ್ಲಿಯ ಹೆಗ್ಗಳಿಕೆ . ಮಾನವನನ್ನು ಪ್ರೀತಿಸು, ವಸ್ತುಗಳನ್ನು ಉಪಯೋಗಿಸು –ಇದು ನಮ್ಮ ಭಾರತದ ತತ್ವ ಎಂದು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಅಧ್ಯಕ್ಷ ಅನಂತಕೃಷ್ಣ ನುಡಿದರು.
ಅವರು ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ 33ನೇ ವರ್ಷದ ಫರಂಗಿಪೇಟೆ ಗಣೇಶೋತ್ಸವದ ಧ್ವಜಾರೋಹಣಗೈದು ಮಾತನಾಡುತ್ತಿದ್ದರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆಯ ಡೀನ್ ಡಾ.ಸತೀಶ್ ಭಂಡಾರಿ ಮಾತನಾಡಿ ನಿಟ್ಟೆ ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ಸೇವಾಂಜಲಿಯ ಮುಖಾಂತರ ಜರಗುವ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು ಹಾಗೆಯೇ ಪರಿಸರಸ್ನೇಹಿ ಗಣೇಶೋತ್ಸವವನ್ನು ಆಚರಿಸಲು ಕರೆ ನೀಡಿದರು.
ಬಾಲಗಂಗಾಧರ ತಿಲಕರ ತತ್ವಗಳನ್ನು ಅಳವಡಿಸಿಕೊಂಡು ಫರಂಗಿಪೇಟೆ ಗಣೇಶೋತ್ಸವ ನಡೆಯುತ್ತಿರುವುದು ನಮ್ಮ ಹೆಗ್ಗಳಿಕೆ ಎಂದು ಉದ್ಯಮಿ ಶಶಿರಾಜ್ ಶೆಟ್ಟಿ ಕೊಳಂಬೆ ನುಡಿದರು.
ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಸ್.ಚಂದ್ರಶೇಖರ ತೇಜ ಮಾರಿಪಳ್ಳ, ಉದಯ ಕುಮಾರ್ ತುಂಬೆ , ಸುರೇಶ್ ಕೊಳಂಬೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ ಪ್ರಸ್ತಾವನೆಗೈದರು. ದೇವದಾಸ್ ಶೆಟ್ಟಿ ಕೊಡ್ಮಾನ್ ವಂದಿಸಿದರು. ತಾರನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.


