ಬಂಟ್ವಾಳ: ರಸ್ತೆ ಹಾಗೂ ಮನೆಗಳಿಗೆ ಹಾನಿಯಾಗುವ ನಿಟ್ಟಿನಲ್ಲಿ ಲಾರಿಗಳಲ್ಲಿ ಮರಳು ಸಾಗಾಟವನ್ನು ನಡೆಸದಂತೆ ಗ್ರಾಮಸ್ಥರೆಲ್ಲಾ ಸೇರಿ ತೀವ್ರವಾಗಿ ವಿರೋಧಿಸಿದ ಘಟನೆ ಭಾನುವಾರ ಬೆಳ್ಳಿಗ್ಗೆ ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿ ನಡೆದಿದೆ. ಗ್ರಾಮಸ್ಥರ ಒಗ್ಗಟ್ಟಿನ ವಿರೋಧದಿಂದಾಗಿ ಮರಳುಗಾರಿಕೆ ಬಂದಿದ್ದ ಗುತ್ತಿಗೆದಾರರು ಬರೀಗೈಯಲ್ಲಿ ವಾಪಸ್ಸಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಕೈಕುಂಜೆ ಬಳಿ ನೇತ್ರಾವತಿ ನದಿ ತೀರದಲ್ಲಿ ಕಾನೂನು ಬಾಹಿರವಾಗಿ ಮರಳುಗಾರಿಕೆ ನಡೆಯುತ್ತಿದ್ದು ಇದಕ್ಕಾಗಿ ದೋಣಿಗಳನ್ನು ತಂದಿರಿಸಲಾಗಿದೆ. ಇದರಿಂದ ಆತಂಕಗೊಂಡ ಕೈಕುಂಜೆ ನಿವಾಸಿಗಳು ಮರಳು ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿ ಸಮತಟ್ಟುಗೊಳಿಸಲಾಗಿರುವ ನಮ್ಮ ಸೈಟ್ಗೆ ಮರಳು ಬೇಕಾಗಿದ್ದು ಅದಕ್ಕಾಗಿ ಮರಳು ಸಂಗ್ರಹಿಸುತ್ತಿದ್ದೇವೆ ಎನ್ನುವ ಉತ್ತರ ನೀಡಿದ್ದರು. ಬಡಾವಣೆ ನಿರ್ಮಿಸುವುದಾದರೆ ಮರಳು ಸಾಗಾಟಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಲಾರಿಗಳಲ್ಲಿ ಮರಳು ಹೊರ ಭಾಗಕ್ಕೆ ಸಾಗಾಟವಾಗುತ್ತಿರುವುದು ಕಂಡು ಬಂದಿದ್ದು ಇದರಿಂದ ಮೊದಲೇ ಹಾನಿಗೀಡಾಗಿರುವ ರಸ್ತೆ ಮತ್ತಷ್ಟು ಹಾನಿಗೀಡಾಗುವ ಭೀತಿಯಿಂದ ಭಾನುವಾರ ಬೆಳಿಗ್ಗೆ ಗ್ರಾಮಸ್ಥರು ತುರ್ತಾಗಿ ಒಟ್ಟು ಸೇರಿ ಸಭೆ ನಡೆಸಿ ಕೈಕುಂಜೆ ರಸ್ತೆಯಲ್ಲಿ ಮರಳು ಸಾಗಾಟ ಮಾಡದಂತೆ ತೀರ್ಮಾನ ಕೈಗೊಂಡಿದ್ದರು. ಕೈಕುಂಜೆ ನಿವಾಸಿಗಳು ಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಮರಳು ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿ ಕೈಕುಂಜೆ ನಿವಾಸಿಗಳ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಇವರ ಗೊಂದಲದ ಹೇಳಿಕೆಗಳು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಒಂದು ಲೋಡು ಮರಳನ್ನು ಕೂಡ ಇಲ್ಲಿಂದ ಸಾಗಿಸದಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮರಳು ಗುತ್ತಿಗೆದಾರರು ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್ಸಾಗ ಬೇಕಾಯಿತು.
