ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ – ಎಸ್.ಡಿ.ಎಂ ರನ್ನರ್ಸ್
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಶ್ರೀಲಂಕಾದ ಸಿಲೋನ್ ಅಥ್ಲೆಟಿಕ್ಸ್ ಫೆಡರೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಭಾರತ-ಶ್ರೀಲಂಕಾ ಅಂತಾರಾಷ್ಟ್ರೀಯ ಸೌಹಾರ್ದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸಂಸ್ಥೆ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಭಾರೀ ಅಂತರದ 728 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. 156 ಅಂಕಗಳನ್ನು ಪಡೆದ ಎಸ್‍ಡಿಎಂ ಸಂಸ್ಥೆಯ ತಂಡ ರನ್ನರ್ಸ್ , ದ.ಕ ಜಿಲ್ಲಾ ಅಥ್ಲೆಟಿಕ್ ತಂಡ 140 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದೆ.

ಉಡುಪಿ ಜಿಲ್ಲಾ ಅಥ್ಲೆಟಿಕ್ ತಂಡ 57, ನಿಟ್ಟೆ ಶಿಕ್ಷಣ ಸಂಸ್ಥೆ ತಂಡ 27 ಹಾಗೂ ಶ್ರೀಲಂಕಾದ ಸಿಲೋನ್ ತಂಡ 16 ಅಂಕಗಳನ್ನು ಪಡೆದಿವೆ. ಪುರುಷರ ವಿಭಾಗದಲ್ಲಿ ಆಳ್ವಾಸ್‍ನ ಸತೀಶ್.ಆರ್.ಎನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಅದೇ ಸಂಸ್ಥೆಯ ಎನ್.ಎಸ್ ಸಿಮಿ ಅತ್ಯುತ್ತಮ ಅಥ್ಲೆಟಿಕ್ ಪ್ರಶಸ್ತಿ ಪಡೆದಿದ್ದಾರೆ. ಪ್ರೊ.ಕಬಡ್ಡಿ ಖ್ಯಾತಿಯ ಸುಕೇಶ್ ಹೆಗ್ಡೆಗೆ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಲಂಕಾದ ಸಿಲೋನ್ ಅಥ್ಲೆಟಿಕ್ಸ್ ಫೆಡರೇಶನ್‍ನ ಯಶೋರೋಹನ್ ಡಿ’ಸಿಲ್ವಾ, ಉಡುಪಿ ಅಥ್ಲೆಟಿಕ್ ಅಸೋಸಿಯೇಶನ್‍ನ ಕಾರ್ಯದರ್ಶಿ ಸತೀಶ್ ಶೆಟ್ಟಿ, ನಿಟ್ಟೆ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕರುಣಾಕರ ಶೆಟ್ಟಿ, ಉಜಿರೆ ಎಸ್.ಡಿ.ಎಂನ ಅಥ್ಲೆಟಿಕ್ ತರಬೇತುದಾರ ಬಿ.ಟಿ ಮಾನೆ, ಅಥ್ಲೆಟಿಕ್ ತರಬೇತುದಾರ ದಿನೇಶ್ ಕುಂದರ್, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
