ಚಂದ್ರಶೇಖರ ಪಾಲೆತ್ತಾಡಿ-ಅಧ್ಯಕ್ಷ ರೋನ್ಸ್ ಬಂಟ್ವಾಳ್-ಗೌ| ಪ್ರ| ಕಾರ್ಯದರ್ಶಿ
ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ 2012-2015ರ ಸಾಲಿನ ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಹಾಗೂ ಗೌರವ ಪ್ರಧಾನ ಕಾರ್ಯದರ್ಶಿ ಆಗಿ ರೋನ್ಸ್ ಬಂಟ್ವಾಳ್ ಸರ್ವಾನುಮತದಿಂದ ಪುನರಾಯ್ಕೆಗೊಂಡರು. ಸಂಘದ ಸ್ಥಾಪಕ ರೂವಾರಿಗಳಾಗಿದ್ದ ಇವರಿಬ್ಬರೂ ಸಂಘದ ಸ್ಥಾಪನೆಯಿಂದಲೂ ಅಧ್ಯಕ್ಷ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕ್ರಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಆಡಳಿತ ಮಂಡಳಿಗೆ ಆಯ್ಕೆಯಾದ 15 ಸದಸ್ಯರ ನೂತನ ಕಾರ್ಯಕಾರಿ ಸಮಿತಿ ಸಭೆಯು ಇಂದಿಲ್ಲಿ ಶನಿವಾರ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದ ಅಕ್ಷಯ ಕಚೇರಿಯಲ್ಲಿ ನಡೆಸಲಾಗಿದ್ದು, ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ದಯಾ ಸಾಗರ್ ಚೌಟ (ಸುದ್ದಿ ಸಂಪಾದಕರು, ರಿಲಾಯನ್ಸ್ ಆರ್‍ವಲ್ರ್ಡ್ ಕನ್ನಡ ನ್ಯೂಸ್), ಗೌರವ ಕಾರ್ಯದರ್ಶಿಯಾಗಿ ಹರೀಶ್ ಕೆ.ಹೆಜ್ಮಾಡಿ (ಸಹಾಯಕ ಸಂಪಾದಕರು, ಅಕ್ಷಯ ಮಾಸಿಕ) ಮುಂದುವರಿಯಲಿದ್ದು, ಗೌ| ಕೋಶಾಧಿಕಾರಿ ಆಗಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು (ಸಂಪಾದಕರು, ಬಂಟರವಾಣಿ ಮಾಸಿಕ), ಜತೆ ಕಾರ್ಯದರ್ಶಿ ಆಗಿ ಬಾಬು ಕೆ.ಬೆಳ್ಚಡ (ಸಹ ಸಂಪಾದಕರು, ತೀಯಾ ಜ್ಯೋತಿ) ಜತೆ ಕೋಶಾಧಿಕಾರಿ ಅಶೋಕ್ ಎಸ್.ಸುವರ್ಣ (ಸಂಪಾದಕರು, ಮೊಗವೀರ ಮಾಸಿಕ) ಆಯ್ಕೆಯಾಗಿದ್ದಾರೆ. ಶ್ಯಾಮ್ ಎಂ.ಹಂಧೆ, ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ ಮತ್ತುಗುರುದತ್ತ್ ಎಸ್.ಪೂಂಜಾ ಮುಂಡ್ಕೂರು (ಕರ್ನಾಟಕ ಮಲ್ಲ), ಡಾ| ದಿನೇಶ್ ಶೆಟ್ಟಿ ರೆಂಜಾಳ (ಉದಯವಾಣಿ ದೈನಿಕ), ಸುಜಾನ್ಹಾ ಲಾರೆನ್ಸ್ ಕುವೆಲ್ಲೋ (ದಿವೋ ಕೊಂಕಣಿ ಸಾಪ್ತಹಿಕ), ಜನಾರ್ಧನ ಎಸ್.ಪುರಿಯಾ (ಪರಿವರ್ತನ ಸುದ್ದಿ) ಜಯ ಸಿ.ಪೂಜಾರಿ (ಪ್ರೆಸ್ ಕ್ಲಬ್, ಮುಂಬಯಿ) ಕ್ರೀಡಾ ಸಮಿತಿ ಕಾರ್ಯಧ್ಯಕ್ಷರು, ಶಿವ ಎಂ.ಮೂಡಿಗೆರೆ (ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷರು) ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಗೊಳಿಸಲಾಯಿತು. ಸಿಎ| ಐ.ಆರ್ ಶೆಟ್ಟಿ, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಡಾ| ಸುರೇಶ್ ಎಸ್.ರಾವ್ ಕಟೀಲು, ಡಾ|ಆರ್.ಕೆ.ಶೆಟ್ಟಿ (ಎಲ್‍ಐಸಿ), ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೆಗೋರಿ ಡಿ’ಅಲ್ಮೇಡಾ, ಡಾ| ಸುನೀತಾ ಎಂ.ಶೆಟ್ಟಿ, ಸುರೇಂದ್ರ ಎ.ಪೂಜಾರಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್ ಸಲಹಾ ಸಮಿತಿ ಸದಸ್ಯರುಗಳಾಗಿ ಹಾಗೂ ನ್ಯಾ|ವಸಂತ ಎಸ್.ಕಲಕೋಟಿ (ಹಿರಿಯ ಪತ್ರಕರ್ತ), ಸಿಎ| ಉಳ್ಳೂರುಗುತ್ತು ಶಂಕರ್ ಎಂ.ಶೆಟ್ಟಿ (ಹಿರಿಯ ಲೆಕ್ಕಪರಿಶೋಧಕರು), ಸುರೇಶ್ ಶೆಟ್ಟಿ ಯೆಯ್ಯಾಡಿ, ಶ್ರೀಧರ್ ಉಚ್ಚಿಲ್, ಪಂ| ನವೀನ್‍ಚಂದ್ರ ಆರ್.ಸನೀಲ್ ಮತ್ತು ಸುಧಾಕರ್ ಉಚ್ಚಿಲ್ ವಿಶೇಷ ಆಮಂತ್ರಿತ ಸದಸ್ಯರುಗಳನ್ನಾಗಿ ಸಮಿತಿ ಆಯ್ಕೆಗೊಳಿಸಿತು ಸಂಘದ ಘನತೆಯೊಂದಿಗೆ ತಮ್ಮ ಸ್ವಂತಿಕೆಯ ಗೌರವವನ್ನೂ ಉಳಿಸುವಲ್ಲಿ ಸಮಿತಿ ಸದಸ್ಯರು ಪ್ರಯತ್ನಿಸಬೇಕು. ಸಮಯಪ್ರಜ್ಞೆಯನ್ನು ರೂಢಿಸಿಕೊಂಡು ತಮ್ಮತಮ್ಮ ಜವಾಬ್ದಾರಿಗಳನ್ನು ನಿಷ್ಠಾವಂತರಾಗಿ ನಿರ್ವಹಿಸಬೇಕು. ಸಂಘದ ಯಾವನೇ ಸದಸ್ಯರ ತ್ವರಿತ ಸೇವೆಗೆ ಕ್ಷಣಾರ್ಧದಲ್ಲಿ ಸ್ಪಂದಿಸಿ ಸೇವಾ ನಿರತರಾಗ ಬೇಕು. ಇದೇ ಸಂಘದ ಮೂಲ ಉದ್ದೇಶ. ಇವೆಲ್ಲವನ್ನು ಪೂರೈಸಿದ್ದಲ್ಲಿ ಸಂಘದ ಎಲ್ಲಾ ಉದ್ದೇಶಗಳು ಈಡೇರುವುದು ಎಂದು ನೂತನ ಕಾರ್ಯಕಾರಿ ಸದಸ್ಯರಿಗೆ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸಲಹಿದರು. ಸಲಹೆದಾರರಾದ ಐ.ಆರ್.ಶೆಟ್ಟಿ ಮಾತನಾಡಿ ಆರಂಭದಿಂದಲೂ ಈ ಸಂಘದ ಪದಾಧಿಕಾರಿಗಳ ಆಯ್ಕೆ ಸರಿಯಾಗಿದ್ದಾಗಿದೆ. ಪತ್ರಕರ್ತರಲ್ಲಿ ನೇರ ನಡೆ ನುಡಿ ಅವಶ್ಯವಿದ್ದು, ಯಾವನೇ ಒಬ್ಬನ ದಬ್ಬಳಿಕೆಗೆ ಒಳಗಾಗಬಾರದು. ಸತ್ಯಾಂಶವನ್ನು ಇಂದಂತೆ ತೋರ್ಪಡಿಸಬೇಕು. ಈ ಸಂಘದ ಸದಸ್ಯರು ಅದಕ್ಕೆ ಬದ್ಧರಾಗಿ ಮುನ್ನಡೆದರೆ ಎಲ್ಲರಿಗೂ ಕ್ಷೇಮವಾಗಲಿ ಎಂದು ಐ.ಆರ್.ಶೆಟ್ಟಿ ಸಲಹಿದರು.
ಸಂಸ್ಥೆಯನ್ನು ವೈಯಕ್ತಿಕ ಲಾಭಕ್ಕಿಂತ ಸದಸ್ಯರ ಐಕ್ಯತೆ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಿಕೊಳ್ಳಿರಿ. ಎಂದಿಗೂ ತಮ್ಮ ಸ್ಥಾನವನ್ನು ದುರುಪಯೋಗ ಪಡಿಸದೆ ಸಂಘದ ಅಸ್ತಿತ್ವಕ್ಕೆ ಗೌರವವನ್ನು ತರುವಲ್ಲಿ ನಿಷ್ಠರಾಗಿರಿ. ಈ ಕಾಲಾವಧಿಯಲ್ಲಿ ಸಂಘವು ಭವ್ಯ ಭವನ, ಸದಸ್ಯರ ಆರೋಗ್ಯನಿಧಿ ಸ್ಥಾಪಿಸಿ ಸದಸ್ಯರು ಮತ್ತು ಸಮಾಜವು ತಮ್ಮಲ್ಲಿ ವಿಶ್ವಾಸ ಮೂಡಿಸುವಂತೆ ಶ್ರಮಿಸಿರಿ ಎಂದು ಹಿತನುಡಿಗಳನ್ನಾಡಿದರು. ಹಾಗೂ ಸಂಘದ ಆರಂಭದಿಂದ ಈವರೇಗೂ ಪದಾಧಿಕಾರಿಗಳಾಗಿ ಶ್ರಮಿಸಿದ ಎಲ್ಲರ ಅಭಾರ ಮನ್ನಿಸಿ ಭವಿಷ್ಯತ್ತಿನ್ನುದ್ದಕ್ಕೂ ಸರ್ವರ ಸಹಯೋಗ ಆಶಿಸಿ ಗೌ|ಪ್ರ|ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಗೌ| ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಸ್ವಾಗತಿಸಿದರು. ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಮನ್ನಿಸಿದರು.
