ಉಳ್ಳಾಲ: ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಶುಕ್ರವಾರ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವೈದ್ಯಕೀಯ ಕಾಲೇಜಿನ ಲೆಕ್ಚರ್ ಹಾಲ್ ತುಂಬಾ ಕೇರಳೀಯ ವೇಷಭೂಷಣಗಲ್ಲಿ ವೈದ್ಯ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಗಮನ ಸೆಳೆದರು. ಸ್ವಾಗತ ಗೋಪುರದಲ್ಲಿ ಬೃಹತ್ ಗಾತ್ರದ ಪೂಕಳಂ (ರಂಗೋಲಿ) ಎಲ್ಲರನ್ನು ಕಣ್ತುಂಬುವಂತೆ ಸ್ವಾಗತಿಸಿತು. ವಿದ್ಯಾರ್ಥಿ ಯೋರ್ವನ ಬಲಿಚಕ್ರವರ್ತಿ ವೇಷ ಆಕರ್ಷಣೀಯ ಬಿಂದುವಾಯಿತು. ಕಾರ್ಯಕ್ರಮಕ್ಕೆ ಚಾಲನೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಯಸ್.ರಮಾನಂದ ಶೆಟ್ಟಿ ನೀಡಿದರು. ಕ್ಷೇಮದ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೆ ರಿಜಿಸ್ಟ್ರಾರ್ ಡಾ.ಯಂ.ಯಸ್.ಮೂಡಿತ್ತಾಯ, ಕ್ಷೇಮದ ಕುಲಸಚಿವ ಡಾ.ಜಯಪ್ರಕಾಶ್ ಶೆಟ್ಟಿ, ವೈಸ್ ಡೀನ್ ಡಾ.ಪ್ರಕಾಶ್, ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಡಾ.ಕೃಷ್ಣ ನಾಯಕ್, ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇರಳದ ಜಾನಪದ ಹಾಡನ್ನು ವಿದ್ಯಾರ್ಥಿಗಳು ಚಪ್ಪಾಳೆಯೊಂದಿಗೆ ಜತೆಯಾಗಿ ಹಾಡಿದರೆ, ಜಾನಪದ ನೃತ್ಯವೂ ಗಮನ ಸೆಳೆಯಿತು.
ವಿದ್ಯಾರ್ಥಿಗಳೇ ಬಡಿಸಿದರು : ವೈವಿಧ್ಯತೆಯೊಂದಿಗೆ ಕಾರ್ಯಕ್ರಮ ನಡೆಸಿದ ವಿದ್ಯಾರ್ಥಿಗಳು ಬಾಳೆ ಎಲೆಯ ಮೂಲಕ ನೆರದವರಿಗೆ ಊಟವನ್ನು ಖುದ್ದು ಅವರೇ ಬಡಿಸಿದರು.
ಚಿಪ್ಸ್, ಪಾಪಡಂ, ತೋರನ್, ಮೆಝುಕುಪುರತ್ತಿ, ಕಾಲನ್, ಓಲನ್, ಸಾಂಬಾರ, ರಸಂ, ಸಿಹಿ ಮತ್ತು ಖಾರದ ಉಪ್ಪಿನಕಾಯಿ, ಯನ್ನು ಬಡಿಸಿ ಓಣಂ ಹಬ್ಬದ ಪರಿಚಯವನ್ನು ವಿದ್ಯಾರ್ಥಿಗಳು ನಡೆಸಿದಂತಾಯಿತು.




















