ಉಳ್ಳಾಲ: ಅವರೆಲ್ಲರೂ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಉತ್ತಮ ಅಂಕದೊಂದಿಗೆ ಪದವಿ ಪಡೆಯೋ ಕನಸು ಕಂಡಿದ್ದರು. ನಿರೀಕ್ಷೆಯಂತೆಯೇ ಎಲ್ಲಾ ವಿಷಯಗಳಲ್ಲೂ ವಿಶಿಷ್ಟ ಶ್ರೇಣಿಯಲ್ಲೇ ಉತ್ತೀರ್ಣರಾಗಿದ್ದರು. ಆದರೆ ಕಾರ್ಪೋರೇಟ್  ಲಾ ವಿಷಯ ಮಾತ್ರ ಅವರ ಭವಿಷ್ಯಕ್ಕೆ ಮುಳುವಾಗಿದೆ.  ಹೆಚ್ಚು ಅಂಕ ಬರುತ್ತೆ ಅಂತಾ ನಂಬಿಕೆಯಿಟ್ಟು ಮರು ಮೌಲಮಾಪಕಕ್ಕೆ ಅರ್ಜಿ  ಸಲ್ಲಿಸಿದ್ದಾರೆ.  ಆದರೆ ರೀಸಲ್ಟ್ ಬಂದಾಗ ಅವರಿಗೆಲ್ಲಾ ಶಾಕ್ ಆಗಿತ್ತು. ಯಾಕೆಂದರೆ ಪಡೆದಿದ್ದ ಅಂಕದಲ್ಲೂ ಮೌಲ್ಯ ಮಾಪಕರು ಕಡಿತ ಮಾಡಿದ್ದಾರೆ. ಮಂಗಳೂರು ವಿವಿ ಮಾಡಿದ ಎಡವಟ್ಟು ಇದೀಗ ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನೇ ತೂಗುಯ್ಯಾಲೆಯಲ್ಲಿರಿಸಿದೆ.

08

04

12

11
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ವಿಶ್ವವಿದ್ಯಾಲಯ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಅನ್ನೋ ಖ್ಯಾತಿಗೂ ಪಾತ್ರವಾಗಿದೆ. ಆದರೆ ಈ ಬಾರಿ ವಿವಿ ಮಾಡಿಕೊಂಡ ಮೌಲ್ಯಮಾಪನದ ಎಡವಟ್ಟಿನಿಂದಲೇ ವಿವಾದಕ್ಕೆ ಸಿಲುಕಿಕೊಂಡಿದೆ. ಹೀಗೆ ಅಂಕಪಟ್ಟಿಯನ್ನ ಹಿಡ್ಕೊಂಡು ವಿವಿ ಮೆಟ್ಟಿಲೇರುತ್ತಿರುವವರು ಎಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತಾಲೂಕಿನ ಮಡಂತ್ಯಾರು ಸೇಕ್ರೇಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿಗಳು.

ಈ ಬಾರಿ ಮಂಗಳೂರು ವಿವಿ ನಡೆಸಿದ್ದ ಪದವಿ ಪರೀಕ್ಷೆಯ ಫಲಿತಾಂಶ ಬಂದಾಗ ಸೇಕ್ರೆಡ್ ಹಾರ್ಟ್  ಕಾಲೇಜಿನ ವಿದ್ಯಾರ್ಥಿ ಗಳಿಗೆ ಶಾಕ್ ಆಗಿತ್ತು. ಕಾರಣ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಳಾಗಿದ್ದ 9 ಮಂದಿ ಒಂದೇ ವಿಷಯದಲ್ಲಿ ಫೇಲ್ ಆಗಿದ್ದರು. ಉಳಿದ ವಿಷಯಗಳಲ್ಲಿ ನೂರಕ್ಕೂ ಅಧಿಕ ಅಂಕ ಪಡೆದಿದ್ದರೆ, ಕಾರ್ಪೊರೇಟ್ ಲಾ ವಿಷಯದಲ್ಲೇ ಅತೀ ಕಡಿಮೆ ಅಂಕ ಪಡೆದು ಅನುತೀರ್ಣರಾಗಿದ್ದಾರೆ.

ಆದರೆ ಮರುಮೌಲ್ಯ ಮಾಪನದಲ್ಲಾದರೂ ನ್ಯಾಯ ಸಿಗುತ್ತೆ ಅಂತಾ ವಿದ್ಯಾರ್ಥಿಗಳು ಮರುಮೌಲ್ಯ ಮಾಪನಕ್ಕೂ ಅರ್ಜಿ ಸಲ್ಲಿಸಿದ್ರು. ಈ ಪೈಕಿ ನಾಲ್ವರು ವಿದ್ಯಾರ್ಥಿನಿಯರಿಗೆ ಈ ಹಿಂದೆ ಬಂದಿದ್ದ ಅಂಕದಲ್ಲಿಯೇ 10 ಅಂಕವನ್ನ ಕಡಿತಗೊಳಿಸಿದ್ದರೆ, ಉಳಿದಿಬ್ಬರಿಗೆ ಹಿಂದಿನಷ್ಟೇ ಅಂಕವನ್ನ ನೀಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ವಿವಿಯ ಉಪ ಕುಲಪತಿಗಳ ಮೊರೆ ಹೋಗಿದ್ದಾರೆ.
ಇದು ನಾಲ್ವರು ವಿದ್ಯಾರ್ಥಿನಿಯರ ಕಥೆಯಲ್ಲಾ, ಬದಲಾಗಿ 2014 -2015 ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆ ಬರೆದಿದ್ದ ಸಾವಿರಾರು ವಿದ್ಯಾರ್ಥಿಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಯಾಕೆಂದರೆ ಈ ಬಾರಿಯ ಪದವಿ ಪರೀಕ್ಷೆಯಲ್ಲಿ ಬಿ.ಕಾಂ ವಿಭಾಗದಲ್ಲಿಯೇ ಬರೋಬ್ಬರಿ 1,300ಕ್ಕೂ ಅಧಿಕ ಮಂದಿ ಅನುತೀರ್ಣರಾಗಿದ್ದಾರೆ. ಉತ್ತಮ ಅಂಕ ಬರುತ್ತೆ ಅನ್ನುವ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ವಿವಿ ನಿರಾಸೆ ಮಾಡಿದೆ.

ಅದ್ರಲ್ಲೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ವಿವಿ  ಕಾರ್ಪೋರೇಟ್ ಲಾ ವಿಷಯದಲ್ಲಿ ಸರಿಯಾಗಿ ಮೌಲ್ಯ ಮಾಪನ ನಡೆಸದೇ ಅನ್ಯಾಯವೆಸಗಿದೆ ಅನ್ನುವ ಆರೋಪವೂ ಕೇಳಿಬಂದಿದೆ. ಮಾತ್ರವಲ್ಲ ಪದವಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮರುಮೌಲ್ಯಮಾಪನಕ್ಕೆ ಅರ್ಜಿ  ಆಹ್ವಾನಿಸಿದ್ದ ವಿವಿ, ಮರುಮೌಲ್ಯ ಮಾಪನದ ಫಲಿತಾಂಶ ಬರುವ ಮುನ್ನವೇ ಮರು ಪರೀಕ್ಷೆಗೆ ಅರ್ಜಿ  ಸಲ್ಲಿಸುವಂತೆ ಸೂಚಿಸಿದೆ.

ಮರುಮೌಲ್ಯಮಾಪನದ ಫಲಿತಾಂಶ ಬಾರದೇ ಇದ್ದಾಗ ವಿದ್ಯಾರ್ಥಿಗಳೆಲ್ಲಾ ಮರುಪರೀಕ್ಷೆಗೂ ಅರ್ಜಿ ಸಲ್ಲಿಸಿದ್ದಾರೆ. ಮರು ಪರೀಕ್ಷೆಗೆ ಅರ್ಜಿ  ಸಲ್ಲಿಸೋ ಕೊನೆಯ ದಿನಾಂಕ ಮುಗಿಯುತ್ತಲೇ ಮರುಮೌಲ್ಯಮಾಪನದ ಫಲಿತಾಂಶವನ್ನು ವಿವಿ ಪ್ರಕಟಿಸಿದೆ. ಮಂಗಳೂರು ವಿವಿಯ ಅಧಿಕಾರಿಗಳು ಹಣ ಮಾಡೋ ಉದ್ದೇಶದಿಂದಲೇ ಇಂತಹ ಎಡವಟ್ಟು ಮಾಡಿದ್ದಾರೆ ಅಂತಾ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ವಿವಿ ಉಪ ಕುಲಪತಿ ಪ್ರೋ. ಕೆ.ಬೈರಪ್ಪ ಅವರನ್ನು ಸಂಪರ್ಕಿಸಿದರೆ ಅವರು ವಿವಿಯಲ್ಲಿ ಸಿಗುತ್ತಿಲ್ಲ. ಇನ್ನು ಪರೀಕ್ಷಾಂಗ ವಿಭಾಗದ ಕುಲಸಚಿವರ ಬಳಿ ಕೇಳಿದ್ರೆ ನಾವು ಸರಿಯಾಗಿಯೇ ಮೌಲ್ಯ ಮಾಪನ ಮಾಡಿದ್ದೇವೆ. ಅನ್ಯಾಯವಾಗಿದೆ ಅನ್ನೋ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರ ಮೂಲಕ ಮನವಿ ಸಲ್ಲಿಸಿದ್ರೆ ನ್ಯಾಯ ಒದಗಿಸೋದಾಗಿ ಹೇಳ್ತಿದ್ದಾರೆ.

ಪ್ರೋ. ಬಿ.ನಾರಾಯಣ, ಪರೀಕ್ಷಾಂಗ ಕುಲಸಚಿವ ಮಂಗಳೂರು ವಿವಿ ಅಂತಿಮ ವರ್ಷದಲ್ಲಿ ಎಲ್ಲಾ ವಿಷಯದಲ್ಲಿ ಉತ್ತೀರ್ಣರಾಗಿ ಒಂದು ವಿಷಯದಲ್ಲಿ ಅನುತೀರ್ಣರಾಗಿದ್ದರೆ ಹೆಚ್ಚುವರಿಯಾಗಿ 10 ಅಂಕ ನೀಡುವುದಕ್ಕೆ ಅವಕಾಶವಿದೆ. ಈ ನಿಯಮವನ್ನು ವಿವಿಯ ಕುಲಸಚಿವರು ಒಪ್ಪಿಕೊಳ್ಳುತ್ತಾರೆ. ಆದರೆ ಯಾವ ವಿದ್ಯಾರ್ಥಿಗಳಿಗೂ ಈ ಮಾನದಂಡವನ್ನು ವಿವಿ ಅನುಸರಿಸದೇ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ.

ಮಂಗಳೂರು ವಿವಿಯ ಮೌಲ್ಯಮಾಪಕರು ಮಾಡಿರುವ ಎಡವಟ್ಟಿನಿಂದಾಗಿ ವಿದೇಶಗಳಲ್ಲಿ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಪ್ರತಿಷ್ಠಿತ ವಿವಿ ಅಂತಾ ಕರೆಯಿಸಿಕೊಳ್ಳೋ ಮಂಗಳೂರು ವಿವಿಯ ಉಪ ಕುಲಪತಿಗಳು ಎಚ್ಚೆತ್ತು ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ.

By suddi9

Leave a Reply

Your email address will not be published. Required fields are marked *